ರಾಜ್ಯ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ : ಶಿಕ್ಷಣ ತಜ್ಞ ನಿರಂಜನಾರಾಧ್ಯ ಟೀಕೆ
ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರವು ಸಂವಿಧಾನದ ಒಕ್ಕೂಟ ಆಶಯವನ್ನು ಎತ್ತಿ ಹಿಡಿಯಲು ರಾಜ್ಯ ಶಿಕ್ಷಣ ನೀತಿ(ಎಸ್‍ಇಪಿ) ರೂಪಿಸಿದ್ದರೂ, ಈ ನೀತಿಯ ಶಿಫಾರಸುಗಳನ್ನು ಜಾರಿ ಮಾಡದೇ, ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲು ಮುಂದಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಟೀಕಿಸಿದ್ದಾರೆ.
ಗುರುವಾರ ಪ್ರಕಟನೆ ಹೊರಡಿಸಿರುವ ಅವರು, ರಾಜ್ಯದಲ್ಲಿ ಸುಮಾರು 25,683 ಶಾಲೆಗಳನ್ನು 700 ಕೆಪಿಎಸ್ ಶಾಲೆಗಳೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸಾರ್ವಜನಿಕ ಶಿಕ್ಷಣವನ್ನು ನಾಶ ಮಾಡಿ, ಖಾಸಗೀಕರಣವನ್ನು ಪೂರ್ಣವಾಗಿ ವಿಸ್ತರಿಸಲು ರೂಪಿಸಿರುವ ಕುತಂತ್ರದ ಯೋಜನೆ ಇದಾಗಿದೆ. ಇದು ರಾಜ್ಯ ಶಿಕ್ಷಣ ನೀತಿಯ ಶಿಫಾರಸ್ಸಿಗೆ ಸಂಪೂರ್ಣವಾಗಿ ವಿರುದ್ಧವಾಗಿದ್ದು, ಹಿಂಬಾಗಿಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಒಳಸಂಚಿನ ಹುನ್ನಾರವಾಗಿದೆ ಎಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯು ಶಾಲಾ ಸಂಕೀರ್ಣಗಳ ಮೂಲಕ ಪರಿಣಾಮಕಾರಿ ಸಂಪನ್ಮೂಲ ಬಳಕೆ ಮತ್ತು ಆಡಳಿತದ ನೆಪವೊಡ್ಡಿ ಲಕ್ಷಾಂತರ ಸರಕಾರಿ ಶಾಲೆಗಳನ್ನು ಹತ್ತು ವರ್ಷಗಳಿಂದ ಮುಚ್ಚುತ್ತಲೇ ಬಂದಿದೆ. ‘ನೆರೆಹೊರೆಯ ಶಾಲೆ’ಯಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಹಲವಾರು ದಶಕಗಳಿಂದ ಸೋತಿರುವ ಸರಕಾರವು, ಗುಣಮಟ್ಟದ ಶಿಕ್ಷಣ ನೀಡುವ ಹೆಸರಿನಲ್ಲಿ ಶಾಲೆಗಳನ್ನು ವಿಲೀನಗೊಳಿಸುತ್ತಿರುವುದು ಕೇವಲ ನೆಪವಾಗಿದೆ ಎಂದು ಅವರು ಹೇಳಿದ್ದಾರೆ.
ಸುಮಾರು 26 ಸಾವಿರ ಶಾಲೆಗಳನ್ನು ಹಂತಹಂತವಾಗಿ ಮುಚ್ಚುವುದರಿಂದ ಗ್ರಾಮೀಣ ಮಕ್ಕಳ ಶಿಕ್ಷಣದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಅದರಲ್ಲೂ ದಲಿತರು, ಅಲ್ಪಸಂಖ್ಯಾತರು, ದುಡಿಯುವ ವರ್ಗದ ಹಿಂದುಳಿದ ಸಮುದಾಯಕ್ಕೆ ಸೇರಿದ ಮಕ್ಕಳು, ವಿಶೇಷವಾಗಿ ಎಲ್ಲ ವರ್ಗದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.