ಬಿಜೆಪಿಯಿಂದ ಪ್ರಜಾಪ್ರಭುತ್ವ ಮತ್ತು ಕರ್ನಾಟಕದ ಅಸ್ಮಿತೆಗೆ ಅವಮಾನ : ಪ್ರಿಯಾಂಕ್ ಖರ್ಗೆ ಆಕ್ರೋಶ
ಬೆಂಗಳೂರು : ಬಿಜೆಪಿಯವರಿಗೆ ಕರ್ನಾಟಕವು ‘ಜುಜುಬಿ’ಯಂತೆ. ಕರ್ನಾಟಕ ಮತ್ತು ಕನ್ನಡಿಗರ ಕುರಿತಾಗಿ ಬಿಜೆಪಿಯಲ್ಲಿ ಯಾವ ಭಾವನೆ ಇದೆ ಎಂಬುದಕ್ಕೆ ಬಿಜೆಪಿ ವಕ್ತಾರನ ಈ ಮಾತುಗಳೇ ನಿದರ್ಶನ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಗಾರಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಬಿಜೆಪಿ ವಕ್ತಾರರೊಬ್ಬರ ವೀಡಿಯೊ ಹಂಚಿಕೊಂಡಿರುವ ಅವರು, ಕರ್ನಾಟಕವು ಬಿಜೆಪಿಗೆ ‘ಜುಜುಬಿ’ಯಾಗಿದ್ದರೆ ನಿಮಗೆ ಇಲ್ಲಿ ವಾಸವೇಕೆ? ನಮ್ಮ ಭಾಷೆ ಏಕೆ? ರಾಜಕಾರಣವೇಕೆ? ಕನ್ನಡಿಗರ ಮತಗಳು ಏಕೆ? ರಾಜ್ಯ ಬಿಜೆಪಿ ಏಕಕಾಲಕ್ಕೆ ಪ್ರಜಾಪ್ರಭುತ್ವವನ್ನು ಮತ್ತು ಕರ್ನಾಟಕದ ಅಸ್ಮಿತೆಯನ್ನು ಅವಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ರಾಜಕೀಯ ಮಾಡುತ್ತಾ, ಕರ್ನಾಟಕದ ಅನ್ನ ತಿನ್ನುತ್ತಾ, ಕರ್ನಾಟಕದ ನೀರು ಕುಡಿಯುತ್ತಾ, ಕನ್ನಡಿಗರ ಋಣದಲ್ಲಿ ಬದುಕುತ್ತಿರುವ ಬಿಜೆಪಿಯವರು ಕರ್ನಾಟಕವನ್ನೆ ಜುಜುಬಿ ಎನ್ನುತ್ತಿರುವುದು ಉಂಡ ಮನೆಯಗಳ ಹಿರಿದಂತೆಯೇ ಸರಿ ಎಂದು ಅವರು ಟೀಕಿಸಿದ್ದಾರೆ.
ಬಿಜೆಪಿ ಕರ್ನಾಟಕವನ್ನು ಜುಜುಬಿ ಎಂದು ತಿಳಿದಿರುವುದರಿಂದಲೇ ತೆರಿಗೆ ಅನ್ಯಾಯ ಮಾಡುತ್ತಿರುವುದೇ? ನೆರೆ, ಬರ ಪರಿಹಾರಗಳಲ್ಲಿ ವಂಚಿಸುತ್ತಿರುವುದೇ? ಕನ್ನಡಿಗರ ಹಿತವನ್ನು ಕಡೆಗಣಿಸಿಸುತ್ತಿರುವುದೇ? ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವುದೇ? ಪ್ರಧಾನಿ ಮೋದಿ ಅವರೇ, ನಿಮಗೆ ನಮ್ಮ ಶ್ರಮ ಬೇಕು, ಬೆವರು ಬೇಕು, ತೆರಿಗೆ ಬೇಕು, ಸಾಮಥ್ರ್ಯ ಬೇಕು, ಹೀಗಿದ್ದರೂ ಕರ್ನಾಟಕ ಮತ್ತು ಕನ್ನಡಿಗರು ನಿಮಗೆ ಜುಜುಬಿಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿ ವಕ್ತಾರನ ಈ ಮಾತು ಬಿಜೆಪಿ ಪಕ್ಷದ ಮಾತು ಎನಿಸಿಕೊಳ್ಳುತ್ತದೆ, ಈ ನಾಡ ದ್ರೋಹದ ಮಾತಿನ ಕುರಿತು ಬಿಜೆಪಿ ನಾಯಕರಾದ ವಿಜಯೇಂದ್ರ, ಆರ್.ಅಶೋಕ್ ಮತ್ತು ಇತರ ಬಿಜೆಪಿ ನಾಯಕರು ಕನ್ನಡಿಗರ ಕ್ಷಮೆ ಕೇಳಬೇಕು ಇಲ್ಲವೇ ಕರ್ನಾಟಕದಲ್ಲಿ ತಮ್ಮ ರಾಜಕೀಯದ ಅಂಗಡಿ ಬಂದ್ ಮಾಡಿಕೊಂಡು ಹೋಗಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.