×
Ad

ಕಾನೂನು ಸುವ್ಯವಸ್ಥೆಯ ಮೇಲೆ ಸಿಎಂ- ಸಚಿವರಿಗೆ ಹಿಡಿತವೇ ಇಲ್ಲ : ಆರ್.ಅಶೋಕ್

Update: 2025-03-18 20:02 IST

ಬೆಂಗಳೂರು : ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಕಾಂಗ್ರೆಸ್ ಸರಕಾರ ಆರೋಪಿಗಳನ್ನು ಬಂಧಿಸುವ ಕೆಲಸವನ್ನೂ ಮಾಡುತ್ತಿಲ್ಲ. ಕಾನೂನು ಸುವ್ಯವಸ್ಥೆಯ ಮೇಲೆ ಸಚಿವರು ಅಥವಾ ಸಿಎಂಗೆ ಹಿಡಿತವೇ ಇಲ್ಲ. ಕರ್ನಾಟಕ ಗೂಂಡಾ ರಾಜ್ಯ ಆಗುತ್ತಿದೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಕಾನೂನು ಸುವ್ಯವಸ್ಥೆ ವಿಷಯ ಪ್ರಸ್ತಾಪಿಸಿದ ಅವರು, ಬಿಡದಿಯ ಟೊಯೋಟ ಕಂಪೆನಿಯ ಶೌಚಾಲಯದ ಗೋಡೆಯ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಬರೆಯಲಾಗಿದೆ. ನಾವೆಲ್ಲರೂ ತಲೆ ತಗ್ಗಿಸುವಂತಹ ಘಟನೆ ನಡೆದಿದೆ. ಜೊತೆಗೆ ಕನ್ನಡಿಗರ ಬಗ್ಗೆ ಅವಾಚ್ಯವಾಗಿ ನಿಂದಿಸಿ ಬರೆಯಲಾಗಿದೆ. ಆದರೂ, ತಪ್ಪಿತಸ್ಥರನ್ನು ಬಂಧಿಸುವ ಕೆಲಸವನ್ನು ಪೊಲೀಸರು ಇನ್ನೂ ಮಾಡಿಲ್ಲ ಎಂದು ದೂರಿದರು.

ಹಾವೇರಿ ಜಿಲ್ಲೆಯಲ್ಲಿ ಹೋರಿ ಹಬ್ಬದ ಸ್ನೇಹ ಲವ್ ಜಿಹಾದ್‍ನಲ್ಲಿ ಅಂತ್ಯವಾಗಿದೆ. ಯುವತಿ ಸ್ವಾತಿಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಲಾಗಿತ್ತು. ನಂತರ ಕಿಡಿಗೇಡಿ ಯುವಕರು ಮದುವೆಯ ಪ್ರಸ್ತಾಪ ಮಾಡಿ ಆಕೆಯನ್ನು ನಂಬಿಸಿದ್ದರು. ಬಳಿಕ ಆಕೆಯನ್ನು ಪಾಳುಬಿದ್ದ ಶಾಲೆಗೆ ಕರೆದುಕೊಂಡು ಹೋಗಿ ಸಾಯಿಸಿದ್ದಾರೆ. ಈ ಪ್ರಕರಣದ ಎಫ್‍ಐಆರ್ ಆದ ಬಳಿಕವೂ ತಾಯಿಗೆ ಮಾಹಿತಿ ನೀಡದೆ ಪೊಲೀಸರು ಪ್ರಕರಣ ಮುಚ್ಚಿಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ಸ್ವಾತಿಯ ಕುಟುಂಬದ ಸ್ಥಿತಿ ಚೆನ್ನಾಗಿಲ್ಲ. ಅವರ ತಂದೆ ವಿದ್ಯುತ್ ಶಾಕ್ ಆಗಿ ತೀರಿಕೊಂಡಿದ್ದರು. ಸ್ವಾತಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಹೋರಿ ಹಬ್ಬ ನಡೆದಾಗ ಅಲ್ಲಿಗೆ ಸ್ನೇಹಿತರ ಜೊತೆ ಹೋಗುತ್ತಿದ್ದರು. ಈಗ ಅವರ ಕುಟುಂಬ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಮಾಹಿತಿ ನೀಡಿದರು.

ಹಂಪಿ ಘಟನೆ: ಹಂಪಿಯಲ್ಲಿ ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರ ಸುದ್ದಿಯಾಗಿದೆ. ಮೂರು ಯುವಕರು ಒಡಿಶಾ ಮೂಲದ ಒಬ್ಬನನ್ನು ಸಾಯಿಸಿ, ಇಸ್ರೇಲ್ ಮಹಿಳೆ ಹಾಗೂ ಹೋಮ್‍ಸ್ಟೇ ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಾರೆ. ಶೇ.60ಕ್ಕೂ ಅಧಿಕ ಪ್ರವಾಸಿಗರು ಇಸ್ರೇಲ್‍ನಿಂದ ರಾಜ್ಯಕ್ಕೆ ಬರುತ್ತಾರೆ. ಇಲ್ಲಿ ಸುರಕ್ಷತೆ ಇರುವ ಕಾರಣಕ್ಕೆ ವಿದೇಶಿಯರು ಭೇಟಿ ನೀಡುತ್ತಾರೆ. ಈ ಘಟನೆಯಿಂದಾಗಿ ಪ್ರವಾಸಿಗರು ಬರುತ್ತಿಲ್ಲ. ಇದರಿಂದಾಗಿ ಹಂಪಿಗೆ ಕೆಟ್ಟ ಹೆಸರು ಬರುವುದರ ಜೊತೆಗೆ, ಆರ್ಥಿಕತೆ ಕುಸಿದಿದೆ ಎಂದು ಟೀಕಿಸಿದರು.

ರಾಜ್ಯವೇ ತಲೆ ತಗ್ಗಿಸುವಂತಹ ಅಪರಾಧಿ ಚಟುವಟಿಕೆಗಳು ನಡೆಯುತ್ತಿದ್ದರೂ ಸರಕಾರ ಯಾರನ್ನೂ ಬಂಧಿಸಿಲ್ಲ. ಇದರಿಂದಾಗಿ ಸರಕಾರ ಬದುಕಿದೆಯೇ ಸತ್ತಿದೆಯೇ ಎಂಬ ಪ್ರಶ್ನೆ ಬರುತ್ತಿದೆ. ಹೇಳುವವರು, ಕೇಳುವವರು ಯಾರೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇಂತಹ ಸ್ಥಿತಿಯನ್ನು ಸೃಷ್ಟಿಸಿದ ಸರಕಾರದ ನಡೆಯನ್ನು ಖಂಡಿಸುತ್ತೇನೆ ಎಂದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News