ರಾಜ್ಯದಲ್ಲಿ 6,70,560 ಕೋಟಿ ಬಂಡವಾಳ ಹೂಡಿಕೆ : ಎಂ.ಬಿ.ಪಾಟೀಲ್
ಬೆಂಗಳೂರು, ಮಾ.10: ರಾಜ್ಯದಲ್ಲಿ ಹಿಂದಿನ ಮೂರು ವರ್ಷಗಳಿಂದ 6,70,560 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. 2,47,571 ಉದ್ಯೋಗ ಸೃಜನೆಗಾಗಿ 117 ಹೂಡಿಕೆ ಒಪ್ಪಂದಗಳು ಆಗಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ಪರಿಷತ್ತಿನ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಡಂಬಡಿಕೆ ಮಾಡಿಕೊಂಡಿರುವ ಯೋಜನೆಗಳ ಪೈಕಿ ಒಟ್ಟು 57 ಯೋಜನೆಗಳು ರಾಜ್ಯ ಉನ್ನತಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಹಾಗೂ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಅನುಮೋದನೆ ಪಡೆದಿರುತ್ತಾರೆ. ಇವುಗಳಿಂದ 79,907.94 ಕೋಟಿ ರೂ. ಬಂಡವಾಳ ಹೂಡಿಕೆ ಮತ್ತು 55,729 ಉದ್ಯೋಗ ಸೃಜನೆ ನಿರೀಕ್ಷಿಸಲಾಗಿದೆ ಎಂದರು.
ಅನುಮೋದನೆಯಾಗಿರುವ 57 ಯೋಜನೆಗಳ ಪೈಕಿ 6 ಯೋಜನೆಗಳು ಅನುಷ್ಠಾನಗೊಂಡಿದ್ದು, ಇವುಗಳಿಂದ 6,900.14 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. 6,654 ಉದ್ಯೋಗ ಸೃಜನೆಯಾಗಿದೆ. ಬಾಕಿ ಯೋಜನೆಗಳು ಅನುಷ್ಠಾನದ ಹಂತದಲ್ಲಿರುತ್ತವೆ ಎಂದು ಎಂ.ಬಿ.ಪಾಟೀಲ್ ಹೇಳಿದರು.