178 ತಾಲೂಕುಗಳಲ್ಲಿ ಮಳೆ ಕೊರತೆ: ʼವಿಬಿಜಿ ರಾಮ್ ಜಿʼ ಉದ್ಯೋಗ ನೀಡಲು ಸಚಿವ ಈಶ್ವರ್‌ ಖಂಡ್ರೆ ಸೂಚನೆ

"ಕುಡಿಯುವ ನೀರು, ಗ್ರಾಮೀಣ ಉದ್ಯೋಗಕ್ಕೆ ಮೊದಲ ಆದ್ಯತೆ"

Update: 2026-07-20 15:00 IST

ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ರಾಜ್ಯದ 178 ತಾಲೂಕುಗಳಲ್ಲಿ ಮಳೆಯ ಕೊರತೆ ಕಂಡುಬಂದಿದ್ದು, ಅವುಗಳಲ್ಲಿ 60 ತಾಲೂಕುಗಳು ತೀವ್ರ ಮಳೆ ಅಭಾವ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುವ ಜೊತೆಗೆ ಯಾರೂ ಗುಳೆ ಹೋಗದಂತೆ ಗ್ರಾಮಗಳಲ್ಲೇ ಉದ್ಯೋಗ ಕಲ್ಪಿಸಲು ಸರ್ಕಾರ ಸೂಚನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್‌ ಬಿ.ಖಂಡ್ರೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ 117 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ 95 ಕೋಟಿ ರೂ. ಮೌಲ್ಯದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಇನ್ನೂ 25 ಕೋಟಿ ರೂ. ವಿವಿಧ ಜಿಲ್ಲೆಗಳಲ್ಲಿ ಲಭ್ಯವಿದೆ ಎಂದು ಹೇಳಿದರು.

ಯಾವುದೇ ಗ್ರಾಮ ಅಥವಾ ತಾಂಡಾದಲ್ಲಿ ನೀರಿನ ಮೂಲಗಳು ಬತ್ತಿಹೋಗಿದ್ದರೆ ಖಾಸಗಿ ಬೋರ್‌ವೆಲ್ ಹಾಗೂ ಬಾವಿಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ನೀರು ಪೂರೈಸಲು, ಅಗತ್ಯವಿದ್ದರೆ ಹೊಸ ಕೊಳವೆಬಾವಿ ಕೊರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಇನ್ನೂ ಮೂರು–ನಾಲ್ಕು ತಿಂಗಳು ಮಳೆ ಬಾರದಿದ್ದರೂ ಮುಂದಿನ ಮುಂಗಾರು ಆರಂಭವಾಗುವವರೆಗೆ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಗತ್ಯ ಸಿದ್ಧತೆಗಳನ್ನು ಸರ್ಕಾರ ಕೈಗೊಳ್ಳುತ್ತಿದೆ ಎಂದು ಹೇಳಿದರು.

ಬ್ಯಾಂಕ್ ಸಾಲ ಬಾಕಿ ಇರುವ ಹಾಗೂ ಒನ್ ಟೈಮ್ ಸೆಟ್ಲ್‌ಮೆಂಟ್ ಮಾಡಿಕೊಂಡಿರುವ ರೈತರಿಗೆ ಸಮುದಾಯ ಸೇವಾ ಕೇಂದ್ರಗಳ ಮೂಲಕ ಬೆಳೆ ವಿಮೆ ಕಂತು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ತಾವು ಬಿತ್ತನೆ ಮಾಡಿರುವ ಬೆಳೆಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಅನುದಾನ ಅನುಪಾತವನ್ನು 90:10ರಿಂದ 60:40ಕ್ಕೆ ಬದಲಾಯಿಸಿದ್ದರೂ, ರಾಜ್ಯ ಸರ್ಕಾರ ಜುಲೈ 1ರಿಂದ ಯೋಜನೆಯನ್ನು ಮುಂದುವರಿಸಿದ್ದು, ಇದುವರೆಗೆ 5 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಉದ್ಯೋಗ ಕೇಳಿ ಬಂದ ಎಲ್ಲರಿಗೂ ಕೆಲಸ ನೀಡಲಾಗಿದೆ. ಶಾಲಾ ಕೊಠಡಿಗಳು, ಆರೋಗ್ಯ ಕೇಂದ್ರಗಳ ದುರಸ್ತಿ, ಕೃಷಿ ಹೊಂಡ, ವಿತರಣಾ ಕಾಲುವೆ, ಹನಿ ನೀರಾವರಿ ಹಾಗೂ ಕಿರು ಅರಣ್ಯ ಅಭಿವೃದ್ಧಿ ಸೇರಿದಂತೆ 318 ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಗ್ರಾಮೀಣ ಜನರು ಇದರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಈ ತಿಂಗಳ ಅಂತ್ಯದೊಳಗೆ 10 ಲಕ್ಷ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, ಪ್ರತಿ ತಿಂಗಳು 1.25 ಕೋಟಿ ಮಾನವ ದಿನಗಳ ಉದ್ಯೋಗ ಕಲ್ಪಿಸುವ ಉದ್ದೇಶವಿದೆ. ಮೊದಲ ತ್ರೈಮಾಸಿಕದಲ್ಲೇ 2,900 ಕೋಟಿ ರೂ. ಬಿಡುಗಡೆ ಮಾಡಿರುವುದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗದ ಸಮಸ್ಯೆ ಎದುರಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ ಸಚಿವರು, “ರೈತರು ದೇಶದ ಬೆನ್ನೆಲುಬು. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಸರ್ಕಾರ ಅನ್ನದಾತರ ರಕ್ಷಣೆಗೆ ಸದಾ ಬದ್ಧವಾಗಿದೆ” ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News