ಮನೆ ಮನೆಗೆ ಉಚಿತ ಜಾತಿ, ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಣೆ ಯೋಜನೆಗೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ
"ರಾಜಕಾರಣ ಮುಖ್ಯವಲ್ಲ, ಜನರ ಬದುಕು ಹಾಗೂ ಹಕ್ಕು ಮುಖ್ಯ"
Photo credit : @DKShivakumar
ಬೆಂಗಳೂರು: ‘ನಿಮ್ಮ ಮತ-ನಿಮ್ಮ ಹಕ್ಕು, ನಿಮ್ಮ ಮತ-ನಿಮ್ಮ ಬದುಕು’. ಇದುವೇ ನಮ್ಮ ಸರಕಾರದ ಗ್ಯಾರಂಟಿ ಮಂತ್ರ, ತತ್ವ ಆಗಿದೆ. ಹೀಗಾಗಿ, ‘ಶಾಶ್ವತ ವಾಸ ಪ್ರಮಾಣಪತ್ರ’ (PRC) ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಯಾರು ಮತದಾನ ಹಕ್ಕಿನಿಂದ ವಂಚಿತರಾಗಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಸುಮಾರು 5 ಕೋಟಿ ಜನರಿಗೆ ಮನೆ ಮನೆಗೆ ತೆರಳಿ ಈಗಾಗಲೇ ಮಾನ್ಯವಾಗಿರುವ ಜಾತಿ ಪ್ರಮಾಣ ಪತ್ರಗಳ ವಿತರಣೆ ಹಾಗೂ ಶಾಶ್ವತ ವಾಸ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರತಿಯೊಬ್ಬರಿಗೂ ಮೂಲಸೌಕರ್ಯ ಒದಗಿಸಿಕೊಟ್ಟು ಅವರ ಹಕ್ಕು ಸಂರಕ್ಷಿಸಲು ಸದಾ ಮುಂಚೂಣಿಯಲ್ಲಿರುವ ರಾಜ್ಯ ನಮ್ಮದು. ಹೀಗಾಗಿ, ‘ನಿಮ್ಮ ಮತ ನಿಮ್ಮ ಹಕ್ಕು’, ‘ನಿಮ್ಮ ಮತ-ನಿಮ್ಮ ಬದುಕು’. ಇದಕ್ಕೆ ನಮ್ಮ ಸರಕಾರ ಗ್ಯಾರಂಟಿ ಎನ್ನುವುದು ನಮ್ಮ ಮಂತ್ರ ಹಾಗೂ ತತ್ವವಾಗಿದೆ ಎಂದರು.
ಈ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮನೆ ಬಾಗಿಲಿಗೆ ಪಹಣಿ ನೀಡುವ ಮೂಲಕ ಹೊಸ ಹೆಜ್ಜೆ ಇಟ್ಟಿತ್ತು. ಇದೀಗ ಭಾರತದಲ್ಲಿಯೇ ಶಾಶ್ವತವಾದ ಪ್ರಮಾಣ ಪತ್ರವನ್ನು ಉಚಿತವಾಗಿ ಮನೆ-ಮನೆಗೆ ತೆರಳಿ ಪ್ರಮಾಣ ಪತ್ರವನ್ನು ನೀಡಲಾಗುವ ಐತಿಹಾಸಿಕ ಅಭಿಯಾನವನ್ನು ನಮ್ಮ ಸರಕಾರ ಕೈಗೊಂಡಿದೆ. ದೇಶದಲ್ಲಿಯೇ 4.85 ಕೋಟಿ ಕುಟುಂಬಗಳಿಗೆ ಈ ದಾಖಲೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡ ಪ್ರಥಮ ರಾಜ್ಯ ಕರ್ನಾಟಕವಾಗಿದೆ ಎನ್ನುವುದು ನಮ್ಮ ಹೆಮ್ಮೆ ಎಂದು ಅವರು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಕಳೆದುಕೊಂಡರೆ ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಐದು ಗ್ಯಾರಂಟಿಗಳ ಜೊತೆ ಭೂಮಿ ಗ್ಯಾರಂಟಿಯನ್ನೂ ನೀಡುತ್ತಿದ್ದು, ಇದರ ಜೊತೆಗೆ ರಾಜ್ಯದಲ್ಲಿ ವಿಶೇಷ ಆಂದೋಲನವನ್ನು ಸರಕಾರ ಕೈಗೊಂಡು ಮತದಾನದ ಗ್ಯಾರಂಟಿಯನ್ನು ಜಾರಿಗೊಳಿಸಿದ್ದೇವೆ. ಹೀಗಾಗಿ, ಈ ಸಂಬಂಧ ಅರ್ಜಿಗಳನ್ನು ಆನ್‍ಲೈನ್ ಮೂಲಕ ಹೋಬಳಿ ಮಟ್ಟದಲ್ಲಿ ತೆರೆಯಲಾಗಿರುವ ಸೇವಾ ಕೇಂದ್ರಗಳಲ್ಲಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಜನರ ಬದುಕು, ಗುರುತು ಬಹಳ ಮುಖ್ಯ. ಗುರುತಿದ್ದಲ್ಲಿ ಬದುಕು ಇದೆ. ಅದರಲ್ಲಿ ಶಕ್ತಿ ಇದ್ದು, ಮುಂದಿನ ದಿನಗಳಲ್ಲಿ ಅವರ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಇದು ಅತ್ಯಗತ್ಯ. ಆಡಳಿತ ವ್ಯವಸ್ಥೆಯಲ್ಲಿಯೇ ರಾಜ್ಯ ಸರಕಾರ ಕೈಗೊಂಡಿರುವ ಐತಿಹಾಸಿಕ ಹೆಜ್ಜೆ ಆಗಿದ್ದು, ಈ ಸೌಲಭ್ಯವನ್ನು ಜನರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಗ್ರಾಮ ಲೆಕ್ಕಿಗರು ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಶ್ರಮ ಅಭಿನಂದನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಶಾಶ್ವತ ನಿವಾಸ ಪ್ರಮಾಣ ಪತ್ರ ಸೇವೆಯ ವೆಬ್‍ಸೈಟ್ ಹಾಗೂ ವಾಟ್ಸ್‍ಅಪ್ ಸೇವೆಗೆ ಚಾಲನೆ ನೀಡಲಾಯಿತು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಿಎಂ ಪ್ರಧಾನ ಕಾರ್ಯದರ್ಶಿ ಮನೀಶ್ ಮೌದ್ಗಿಲ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಆಯೋಗ ಕೇಳುವ ದಾಖಲೆ ಶಾಶ್ವತ ನಿವಾಸ ಪ್ರಮಾಣ ಪತ್ರ: ‘ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಒಂದಾದ ಶಾಶ್ವತ ನಿವಾಸ ಪ್ರಮಾಣಪತ್ರವನ್ನು ನೀಡುವ ಐತಿಹಾಸಿಕ ಕಾರ್ಯಕ್ರಮವನ್ನು ರಾಜ್ಯ ಸರಕಾರ ಕೈಗೊಂಡಿದೆ. ಚುನಾವಣಾ ಆಯೋಗ ಸೂಚಿಸಿರುವ ಕ್ರಮಗಳನ್ನು ಚಾಚೂ ತಪ್ಪದೆ ಸರಕಾರ ಪಾಲಿಸುತ್ತಿದೆ. ರಾಜ್ಯದ ನಿವಾಸಿಗಳಿಗೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ನೀಡುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ. ಇದನ್ನು ಪಕ್ಷಾತೀತವಾಗಿ ನಾವು ಜವಾಬ್ದಾರಿಯಿಂದ ಕೈಗೊಂಡಿದ್ದೇವೆ’
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ