ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿನ ವಾಣಿಜ್ಯ ಮಳಿಗೆ ನಿರ್ವಹಣೆಯನ್ನು ಸರಳೀಕರಣ ಮಾಡಲು ತಂತ್ರಾಂಶ : ರಾಮಲಿಂಗಾರೆಡ್ಡಿ
ಬೆಂಗಳೂರು : ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಗಳಲ್ಲಿನ ವಾಣಿಜ್ಯ ಮಳಿಗೆಗಳ ನಿರ್ವಹಣೆಯನ್ನು ಸರಳೀಕರಣಗೊಳಿಸಲು ತಂತ್ರಾಂಶ ಸಿದ್ದಪಡಿಸಲಾಗಿದ್ದು, ನಿಗಮದ ಆಂತರಿಕ ಸಂಪನ್ಮೂಲ ಬಳಸಿಕೊಂಡು ನಿಗಮದ ವತಿಯಿಂದಲೇ ಇದನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ಇಲ್ಲಿನ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರ ವಿತರಣೆ ಮತ್ತು ವಾಣಿಜ್ಯ ಮಳಿಗೆಗಳ ಇ-ವಾಣಿಜ್ಯ ತಂತ್ರಾಂಶ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಅನುಕೂಲವಾಗಲು ಬಸ್ ನಿಲ್ದಾಣಗಳಲ್ಲಿ ಜನರಲ್ ಸ್ಟಾಲ್, ಉಪಹಾರ ಗೃಹ ಸೇರಿ 1,847 ವಾಣಿಜ್ಯ ಮಳಿಗೆಗಳಿದ್ದು, ಪರವಾನಗಿ ಶುಲ್ಕ, ಜಿ.ಎಸ್.ಟಿ. ಮೊತ್ತ ಪಾವತಿ ಮತ್ತಿತರ ವ್ಯವಹಾರವನ್ನು ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತಿತ್ತು ಎಂದರು.
ವಾಣಿಜ್ಯ ಮಳಿಗೆಗಳ ನಿರ್ವಹಣೆಯನ್ನು ಮ್ಯಾನ್ಯುಯಲ್ ವ್ಯವಸ್ಥೆಯ ಮೂಲಕ ನಿರ್ವಹಿಸಲು ಹೆಚ್ಚಿನ ಕಾಲಾವಕಾಶದ ಅವಶ್ಯಕತೆ ಇರುತ್ತದೆ. ಅಲ್ಲದೆ ಲೆಕ್ಕಾಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಏಕರೂಪತೆ ಮತ್ತು ದಕ್ಷತೆ ಹೆಚ್ಚಿಸಲು ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಹಾಗೆಯೇ ಅಪಘಾತದಿಂದ ಮೃತಪಟ್ಟ ಸಿಬ್ಬಂದಿಗಳ ಅವಲಂಬಿತರಿಗೆ ಸಾಂತ್ವಾನ ಹೇಳಿ, ಸುಮ್ಮನಾಗಬಾರದು. ಮೃತರ ಕುಟುಂಬಕ್ಕೆ ಸಹಾಯ ಮಾಡಬೇಕು. ಈ ನಿಟ್ಟಿನಲ್ಲಿ ಮೃತರ ಅವಲಂಬಿತರ ಮುಂದಿನ ಜೀವನವು ಆರ್ಥಿಕವಾಗಿ ಭದ್ರತೆಯಿಂದ ಕೂಡಿರಲಿ ಎಂಬ ಸದ್ದುದೇಶದಿಂದ ಸಾರಿಗೆ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ವಾಣಿಜ್ಯ ಮಳಿಗೆಗಳ ನಿರ್ವಹಣೆ ತಂತ್ರಾಂಶ ಇ-ವಾಣಿಜ್ಯ ಬಿಡುಗಡೆ ಮಾಡಲಾಯಿತು. 31 ಸಿಬ್ಬಂದಿಗಳ ಕುಟುಂಬದ ಸದಸ್ಯರಿಗೆ ತಲಾ ರೂ.10 ಲಕ್ಷ ರೂ.ಗಳ ಹಾಗೂ ಇಬ್ಬರು ಅವಲಂಬಿತರಿಗೆ ತಲಾ 14 ಲಕ್ಷ ರೂ.ಗಳ ಚೆಕ್ ಅನ್ನು ವಿತರಿಸಲಾಯಿತು.
ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಸಂಭವಿಸಿದ ಅಪಘಾತದಲ್ಲಿ ಹಾಗೂ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂರು ಸಿಬ್ಬಂದಿಯ ಅವಲಂಬಿತರಿಗೆ ತಲಾ 1 ಕೋಟಿ ರೂ. ಚೆಕ್ ನೀಡಲಾಯಿತು. ನಿಗಮದ ಉಪಾಧ್ಯಕ್ಷ ಮುಹಮ್ಮದ್ ರಿಝ್ವಾನ್ ನವಾಬ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಡಾ. ನಂದಿನಿದೇವಿ ಕೆ., ಇಬ್ರಾಹಿಂ ಮೈಗೂರ ಸೇರಿದಂತೆ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.