ಶಾಸಕ ಮುನಿರತ್ನ ಜೊತೆ ಗಲಾಟೆ ಪ್ರಕರಣ: ಐವರ ವಿರುದ್ಧ ಎಫ್‌ಐಆರ್
ಬೆಂಗಳೂರು: ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ವೇಳೆ ಶಾಸಕ ಮುನಿರತ್ನ ಅವರೊಂದಿಗೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾಜಿ ಕಾರ್ಪೊರೇಟರ್ ಗೋವಿಂದರಾಜು ನೀಡಿದ ದೂರಿನ ಆಧಾರದಲ್ಲಿ ಶೇಖರ್, ವೇಲು ನಾಯ್ಕರ್, ಮೋಹನ್ ಕುಮಾರ್, ಜಿ.ಕೆ. ವೆಂಕಟೇಶ್ ಹಾಗೂ ಶಾಸುಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಲ್ಲತ್ತಹಳ್ಳಿಯ ಅಂಬೇಡ್ಕರ್ ಕಾಲೇಜಿನ ಮತಗಟ್ಟೆ ಬಳಿ ಗುರುವಾರ ಶಾಸಕ ಮುನಿರತ್ನ ತೆರಳಿದ್ದ ವೇಳೆ ಅವರಿಗೂ ಆರೋಪಿಗಳಿಗೂ ನಡುವೆ ನೂಕಾಟ, ತಳ್ಳಾಟ ಹಾಗೂ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಈ ಸಂಬಂಧ ಮುನಿರತ್ನ ಪರವಾಗಿ ಗೋವಿಂದರಾಜು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.