Photo: screengrab/x.com/Nimmabhaskar 

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ನ ಮಾಜಿ ಆಯುಕ್ತ ಹಾಗೂ ಬಿಜೆಪಿ ನಾಯಕ ಭಾಸ್ಕರ್ ರಾವ್ ಅವರು ತಮ್ಮ ಕಾರಿಗೆ ಆಯುಧ ಪೂಜೆ ನೆರವೇರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೇ ಕಾರಿನ ಹೆಸರಿನಲ್ಲಿ 12 ಸಾವಿರ ರೂ.ಗೂ ಅಧಿಕ ಸಂಚಾರ ದಂಡ ಬಾಕಿ ಇರುವುದಾಗಿ ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.

ಅ.20ರಂದು ಭಾಸ್ಕರ್ ರಾವ್ ಅವರು ಸಾಂಪ್ರದಾಯಿಕ ಉಡುಗೆ ಧರಿಸಿ, ಬಾಳೆ ಎಲೆ ಮತ್ತು ಹೂವಿನ ಹಾರಗಳಿಂದ ಅಲಂಕರಿಸಿದ್ದ ಕಾರಿಗೆ ಪೂಜೆ ಸಲ್ಲಿಸುವ ವಿಡಿಯೊವನ್ನು ಎಕ್ಸ್‌ ನಲ್ಲಿ ಹಂಚಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, KA 0x MZ 1xxx ನೋಂದಣಿ ಸಂಖ್ಯೆಯ ಅವರ ಕಾರಿಗೆ ಸಂಬಂಧಿಸಿದ ಬಾಕಿ ಇ-ಚಲನ್‌ ಗಳ ಸ್ಕ್ರೀನ್‌ಶಾಟ್‌ ಗಳನ್ನು ಎಕ್ಸ್ ಬಳಕೆದಾರರೊಬ್ಬರು ಹಂಚಿಕೊಂಡು ಪ್ರಶ್ನೆ ಎತ್ತಿದ್ದಾರೆ.

ಸಂಚಾರ ಸಿಗ್ನಲ್ ಉಲ್ಲಂಘನೆ, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ, ಝೀಬ್ರಾ ಕ್ರಾಸಿಂಗ್ ಬಳಿ ವಾಹನ ನಿಲ್ಲಿಸುವುದು, ಅತಿವೇಗದ ಚಾಲನೆ ಹಾಗೂ ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಹಲವು ಉಲ್ಲಂಘನೆಗಳಿಗೆ ಸಂಬಂಧಿಸಿದ ದಂಡಗಳು ಬಾಕಿ ಇವೆ ಎಂದು ಸ್ಕ್ರೀನ್‌ ಶಾಟ್‌ ಗಳಲ್ಲಿ ತೋರಿಸಲಾಗಿದೆ. ಪ್ರತಿ ಉಲ್ಲಂಘನೆಗೆ 500ರಿಂದ 1,000 ರೂ.ವರೆಗೆ ದಂಡ ವಿಧಿಸಿರುವುದಾಗಿ ದಾಖಲೆಗಳಲ್ಲಿ ಕಾಣಿಸಿದೆ. ಒಟ್ಟು ಬಾಕಿ ಮೊತ್ತ 12 ಸಾವಿರ ರೂ. ಮೀರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ತಿಳಿಸಿದ್ದಾರೆ.

ಮಾಜಿ ಪೊಲೀಸ್ ಆಯುಕ್ತರ ಕಾರಿನಲ್ಲೇ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ದಂಡ ಬಾಕಿ ಇರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ವಾಹನ ಸವಾರರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಾಗ, ಜವಾಬ್ದಾರಿಯುತ ಹುದ್ದೆಯಲ್ಲಿದ್ದವರ ವಾಹನದ ವಿಚಾರದಲ್ಲೂ ಅದೇ ಕ್ರಮ ಅನುಸರಿಸಬೇಕೆಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬಾಕಿ ಸಂಚಾರ ದಂಡಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಆದರೆ, ಈ ಬಗ್ಗೆ ಭಾಸ್ಕರ್ ರಾವ್ ಅವರಿಂದ ಸಾರ್ವಜನಿಕವಾಗಿ ಯಾವುದೇ ಸ್ಪಷ್ಟನೆ ಹೊರಬಿದ್ದಿರುವುದು ವರದಿಯಾಗಿಲ್ಲ.

ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಸಂಚಾರ ದಂಡ ವಸೂಲಾತಿ ವಿಚಾರವೂ ಚರ್ಚೆಯಲ್ಲಿದೆ. ರಾಜ್ಯಾದ್ಯಂತ ಸುಮಾರು 3,000 ಕೋಟಿ ರೂ. ಮೊತ್ತದ ಇ-ಚಲನ್ ದಂಡ ಬಾಕಿ ಇದೆ ಎಂಬ ಅಂಕಿಅಂಶಗಳು ವರದಿಯಾಗಿವೆ. ಇಂತಹ ಸಂದರ್ಭದಲ್ಲಿ ಮಾಜಿ ಪೊಲೀಸ್ ಆಯುಕ್ತರ ಕಾರಿನ ದಂಡದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಭಾಸ್ಕರ್ ರಾವ್ ಅವರ ಕಾರಿಗೆ ಬಾಕಿ ಇರುವ ದಂಡದ ಸ್ಕ್ರೀನ್‌ಶಾಟ್ ಹಂಚಿಕೊಂಡ ಫ್ಯಾಕ್ಟ್‌ ಚೆಕರ್ ಮಹಮ್ಮದ್ ಝುಬೈರ್ ಅವರು, “ ಬೆಂಗಳೂರು ನಗರ ಪೊಲೀಸ್ ನ ಮಾಜಿ ಆಯುಕ್ತ ಹಾಗೂ ಬಿಜೆಪಿ ನಾಯಕನಿಗೆ ವಿಜಯದಶಮಿಯ ಶುಭಾಶಯಗಳು! ಬಾಕಿ ಇರುವ ಫೈಲ್‌ ಗಳೂ ಆದಷ್ಟು ಬೇಗ ಕ್ಲಿಯರ್ ಆಗಲಿ ಎಂದು ಆಶಿಸುತ್ತೇವೆ” ಎಂದು ವ್ಯಂಗ್ಯವಾಡಿದ್ದಾರೆ.

ಮತಗಳ್ಳತನ, ಚುನಾವಣಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಹಗರಣದ ವಿರುದ್ಧ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯೂಟ್ಯೂಬರ್ ಧ್ರುವ್ ರಾಠಿ ಅವರ ಪೌರತ್ವ ಮತ್ತು ವೀಸಾ ಸ್ಥಿತಿಯನ್ನು ಪರಿಶೀಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಬಳಿಕ ಧ್ರುವ್ ರಾಠಿ ಅವರು ತಮ್ಮ ಭಾರತೀಯ ಪಾಸ್‌ಪೋರ್ಟ್ ಪ್ರದರ್ಶಿಸಿ, ತಾನು ಭಾರತೀಯ ಪ್ರಜೆ ಎಂದು ಹೇಳಿಕೆ ನೀಡಿದ್ದರು. “ಯಾರು ಏನು ಮಾಡಿದರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದಾದ, ಶಿಕ್ಷೆಯೇ ಇಲ್ಲದ ದೇಶವಾಗಿ ಭಾರತ ಉಳಿದಿದೆ” ಎಂದು ಭಾಸ್ಕರ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor