×
Ad

ಎಸ್‍ಸಿಎಸ್‍ಪಿ-ಟಿಎಸ್‍ಪಿ ಅನುದಾನ | ದಲಿತರ ಅಭಿವೃದ್ಧಿ ಕುರಿತು ಅಧ್ಯಯನ ವರದಿ ಬಿಡುಗಡೆಗೆ ಆಗ್ರಹ

Update: 2025-02-28 00:20 IST

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಪರಿಶಿಷ್ಟರ ಕಲ್ಯಾಣಕ್ಕಾಗಿ ಎಸ್‍ಸಿಎಸ್‍ಪಿ-ಟಿಎಸ್‍ಪಿ ಯೋಜನೆಯಡಿ ಮೀಸಲಿಟ್ಟ ಅನುದಾನ ಸದ್ಬಳಕೆ ಸಂಬಂಧ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಬೇಕು. ಅಲ್ಲದೆ, ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗುತ್ತಿದೆ, ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಅಧ್ಯಯನ ಮಾಡಿ, ವರದಿ ಬಿಡುಗಡೆ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಆಗ್ರಹಿಸಿದೆ.

ಗುರುವಾರ ಈ ಸಂಬಂಧ ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಒಕ್ಕೂಟದ ಎನ್.ವೆಂಕಟೇಶ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಇಂದೂಧರ ಹೊನ್ನಾಪುರ, ಎನ್. ಮುನಿಸ್ವಾಮಿ, ಜೀವನಹಳ್ಳಿ ವೆಂಕಟೇಶ್, ‘ಗ್ಯಾರಂಟಿಗಳಿಗೆ ಬಳಸಿರುವ ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಕೂಡಲೇ ಹಿಂದಿರುಗಿಸಬೇಕು. ಕಾಯ್ದೆಯ ‘7ಡಿ' ಸೆಕ್ಷನ್ ರದ್ದುಪಡಿಸಿದಂತೆ ‘7ಸಿ'ಯನ್ನೂ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ.

‘ಸಂವಿಧಾನ ವಿಧಿ 46ರ ಆಶಯವನ್ನು ಪಾಲಿಸಬೇಕೆಂದು ಒತ್ತಾಯಿಸುತ್ತದೆ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಬಾಕಿ ಉಳಿದಿರುವ 5ಲಕ್ಷ ಅರ್ಜಿಗಳನ್ನು ಸೂಕ್ತ ನೆರವು ನೀಡಿ ಶೀಘ್ರ ಇತ್ಯರ್ಥಗೊಳಿಸಬೇಕು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವೇ ಜಾರಿಗೆ ತಂದ ಎಸ್‍ಸಿಎಸ್‍ಪಿ-ಟಿಎಸ್‍ಪಿ ಯೋಜನೆಯ ಕಾಯ್ದೆಯು ತನ್ನ ಪರಿಭಾಷೆಯಲ್ಲಿ ಎಸ್‍ಸಿಎಸ್‍ಪಿ-ಟಿಎಸ್‍ಪಿ ಎಂಬುದು ಎಸ್‍ಸಿ-ಎಸ್‍ಟಿ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿರುವ ಯೋಜನೆ ಎನ್ನುತ್ತದೆ.

ಅದರಲ್ಲಿಯೇ ‘ಅಭಿವೃದ್ಧಿಯ ಅಂತರ' ಎಂದರೆ ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದಂತೆ ರಾಜ್ಯ ಸರಾಸರಿಗೆ ಹೋಲಿಸಿದಾಗ ಎಸ್‍ಸಿ ಅಥವಾ ಎಸ್‍ಟಿ ಅಭಿವೃದ್ಧಿ ಸೂಚಕಗಳಲ್ಲಿರುವ ವ್ಯತ್ಯಾಸಗಳು ಎಂದು ವ್ಯಾಖ್ಯಾನಿಸುತ್ತದೆ. ಸಾರಾಂಶದಲ್ಲಿ, ಎಸ್‍ಸಿ-ಎಸ್‍ಟಿ (ದಲಿತರು) ಮತ್ತು ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

2023-24ನೇ ಸಾಲಿನಿಂದಲೂ ಎಸ್‍ಸಿಎಸ್‍ಪಿ-ಟಿಎಸ್‍ಪಿ ಹಣದಲ್ಲಿ ಸುಮಾರು 25 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೂ, 15ಸಾವಿರ ಕೋಟಿ ರೂ.ಗಳನ್ನು ಅನ್ಯ ಉದ್ದೇಶಕ್ಕೂ ಬಳಸಿರುವುದು ಕಾಯ್ದೆಯನ್ನು ಉಲ್ಲಂಘಿಸಿದಂತೆ ಆಗುತ್ತದೆ. ಅಷ್ಟೇ ಅಲ್ಲ, ಬಿಜೆಪಿ ಸರಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರಕಾರ ಮಾಡಿದಂತಾಗಿದೆ. ಅಲ್ಲದೆ ಸರಕಾರದ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ಶೋಚನೀಯ. ದಲಿತರ ಒಗ್ಗಟ್ಟಿನ ಓಟುಗಳಿಂದ ಸರಕಾರ ರಚಿಸಿದ ಕಾಂಗ್ರೆಸ್, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿರುವುದು ಸಮುದಾಯದಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಗ್ಯಾರಂಟಿಗಳು ಉತ್ತಮ ಯೋಜನೆಗಳೇ. ಆದರೆ, ಅವುಗಳ ಉದ್ದೇಶವೇ ಬೇರೆ, ಎಸ್‍ಸಿಎಸ್‍ಪಿ-ಟಿಎಸ್‍ಪಿ ಕಾಯ್ದೆಯ ಉದ್ದೇಶವೇ ಬೇರೆ. ಕರ್ನಾಟಕ ಮಾನವ ಅಭಿವೃದ್ಧಿ ವರದಿ-2015ರ ಪ್ರಕಾರ ಇತರೆ ಸಮುದಾಯಗಳಿಗೆ ಹೋಲಿಸಿಕೊಂಡರೆ ದಲಿತರು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಸಚಿವರು ಮತ್ತು ಸಿಎಂ ಹೇಳುತ್ತಿರವಂತೆ, ದಲಿತರಿಗೆ ಮೀಸಲಿಟ್ಟ ಹಣವನ್ನು ಎಸ್‍ಸಿಎಸ್‍ಪಿ-ಟಿಎಸ್‍ಪಿಯ ಹೊರತಾದ ಅಭಿವೃದ್ಧಿ ಯೋಜನೆಗಳಿಗೆ ಬಳಸುವುದೂ ಬಡತನ ನಿರ್ಮೂಲನೆಯ ಉದ್ದೇಶವನ್ನೇ ಹೊಂದಿದೆ ಎಂಬ ಸಮರ್ಥನೆ ಒಪ್ಪತಕ್ಕುದಲ್ಲ ಎಂದು ಹೇಳಿದ್ದಾರೆ.

ಹಾಗೇನಾದರೂ ಅವರ ಮಾತು ನಿಜವಾಗಿದ್ದರೆ ಕಳೆದ 2014ರಿಂದ ಇದೇ ದಲಿತರಿಗಾಗಿ ಮೀಸಲಿಟ್ಟ 29,5687ಕೋಟಿ ರೂ.ಹಣವನ್ನು ಯಾವುದಕ್ಕೆಲ್ಲಾ ಖರ್ಚು ಮಾಡಲಾಗಿದೆ, ಎಷ್ಟು ಕುಟುಂಬಗಳು ಬಡತನ ರೇಖೆಗಿಂತ ಮೇಲೆ ಬಂದಿವೆ ಎಂಬ ಅಂಕಿ-ಅಂಶಗಳನ್ನು ಸರಕಾರ ಬಿಡಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News