×
Ad

ಸಿಜೆಐ ಗವಾಯಿ ಮೇಲೆ ಶೂ ಎಸೆತ ಪ್ರಕರಣ: ರಾಕೇಶ್ ಕಿಶೋರ್ ವಿರುದ್ಧ ಯುಎಪಿಎ ಪ್ರಕರಣ ದಾಖಲಿಸಲು ವಕೀಲರು, ಪ್ರಗತಿಪರ ಹೋರಾಟಗಾರರ ಆಗ್ರಹ

Update: 2025-10-08 14:33 IST

ಬೆಂಗಳೂರು, ಅ.8: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮೇಲೆ ಸನಾತನಿ ವಕೀಲ ರಾಕೇಶ್ ಕೀಶೋರ್ ಶೂ ಎಸೆದು ಅಪಮಾನ ಮಾಡಿದ್ದು, ಈ ಕೂಡಲೇ ಅವನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಹೈಕೋರ್ಟ್ ವಕೀಲರು ಸೇರಿದಂತೆ ಪ್ರಗತಿಪರ ಹೋರಾಟಗಾರರು ಆಗ್ರಹಿಸಿದ್ದಾರೆ.

ಬುಧವಾರ ನಗರದ ಹೈಕೋರ್ಟ್ ಮುಂಭಾಗ ಸಿಜೆಐ ವಿರುದ್ಧ ಶೂ ಎಸೆತ ಪ್ರಕರಣವನ್ನು ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ವಕೀಲ ಎಸ್.ಬಾಲನ್, ಪ್ರಜಾಪ್ರಭುತ್ವ ಹಾಗೂ ಭಾರತ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ಅತ್ಯಂತ ಹೀನಾಯವಾದ ದಾಳಿ. ನಾಥುರಾಮ್ ಗೋಡ್ಸೆಯಂತ ಕೊಲೆಗಡುಕ ಮನಸ್ಥಿತಿಯವರ  ಮೊಮ್ಮಕ್ಕಳೇ ಇಂತಹ ಕೃತ್ಯಗಳನ್ನು ಮಾಡುತ್ತಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಲ್ಲೆಯು ಜಾತಿ ಪೂರ್ವಾಗ್ರಹ ಮತ್ತು ಉಗ್ರಗಾಮಿ ಸಿದ್ಧಾಂತದಲ್ಲಿ ಬೇರೂರಿರುವ ಅಪಾಯಕಾರಿ ಮನಸ್ಥಿತಿಯನ್ನು ತೋರುತ್ತದೆ. ಈ ದಾಳಿಯು ಕೇವಲ ಒಬ್ಬ ವ್ಯಕ್ತಿಯ ಮೇಲೆ ನಡೆದ ದಾಳಿ ಅಲ್ಲ, ನ್ಯಾಯಾಂಗ ಸ್ವಾತಂತ್ರ‍್ಯವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ದೊಡ್ಡ ಪಿತೂರಿ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಅಡಿಪಾಯದ ಮೇಲೆ ನಡೆದ ದಾಳಿ. ಸಮಾನತೆಯನ್ನು ನಂಬುವ ಪ್ರತಿಯೊಬ್ಬ ನಾಗರಿಕರು ಇಂದು ನ್ಯಾಯಾಂಗದ ಪರವಾಗಿ ನಿಲ್ಲಬೇಕು ಎಂದು ಬಾಲನ್ ಕರೆ ನೀಡಿದರು.

ಸಿ.ಎಸ್.ದ್ವಾರಕನಾಥ್ ಮಾತನಾಡಿ, ಮಾಜಿ ಮುಖ್ಯನ್ಯಾಯಮೂರ್ತಿಗಳಾದ ಕೆ.ಜಿ.ಬಾಲಕೃಷ್ಣನ್, ಭೀಮೈ ಸೇರಿದಂತೆ ದಲಿತ ನ್ಯಾಯಾಧೀಶರ ಮೇಲಿನ ಹಿಂದಿನ ದಾಳಿಗಳು ಮತ್ತು ಪ್ರಸ್ತುತ ವಾತಾವರಣದ ನಡುವೆ ವಕೀಲರ ಹೋಲಿಕೆಗಳನ್ನು ವಿವರಿಸಿದರು. ರಾಷ್ಟಿçÃಯ ಸ್ವಯಂ ಸೇವಕ ಸಂಘ ಸೇರಿದಂತೆ ಕೆಲವು ಬಲಪಂಥೀಯ ಗುಂಪುಗಳು ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಅಭಿಯಾನಗಳನ್ನು ಉತ್ತೇಜಿಸುತ್ತಿವೆ. ನ್ಯಾ.ಗವಾಯಿ ಜಾತಿಯ ಕಾರಣವನ್ನು ಗುರಿಯಾಗಿಸಿಕೊಂಡು ಕೃತಕ ಬುದ್ಧಿಮತ್ತೆಯಿಂದ ರಚಿಸಲಾದ ವೀಡಿಯೊಗಳು ಸೇರಿವೆ ಎಂದರು.

ವಕೀಲೆ ಪೂರ್ಣ ಮಾತನಾಡಿ, ಸಾಂವಿಧಾನಿಕ ಸಮಾನತೆಗಾಗಿ ನಿಲ್ಲುವ ನ್ಯಾಯಾಧೀಶರನ್ನು ಅಪಖ್ಯಾತಿಗೊಳಿಸುವ ವ್ಯವಸ್ಥಿತ ಪ್ರಯತ್ನ. ಜಾತಿ ಮತ್ತು ದ್ವೇಷ ರಾಜಕೀಯವು ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಹೇಗೆ ಬೆದರಿಕೆ ಹಾಕುತ್ತಿದೆ ಎಂಬುದನ್ನು ತೋರಿಸುತ್ತದೆ. ದಿಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡು ರಾಕೇಶ್ ಕಿಶೋರ್’ನನ್ನು ಕೂಡಲೇ ಬಂಧಿಸಬೇಕು. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಿಜೆಐ ಬಗ್ಗೆ ದ್ವೇಷಪೂರಿತ ವೀಡಿಯೊಗಳು ಮತ್ತು ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಕೀಲ ಜೆ.ವಿ.ಶ್ರೀನಿವಾಸ್ ಮಾತನಾಡಿ, ಹಲ್ಲೆಯ ನಂತರ ದಾಳಿಕೋರನ ಮುಕ್ತ ಸಂದರ್ಶನಗಳು ಇನ್ನಷ್ಟು ತೀವ್ರ ಆತಂಕ ಉಂಟುಮಾಡಿವೆ. ಸಿಜೆಐ ಮೇಲೆ ಯಾರಾದರೂ ದಾಳಿ ಮಾಡಿ ಸ್ವತಂತ್ರವಾಗಿ ಓಡಾಡುತ್ತಾ ಸಂದರ್ಶನಗಳನ್ನು ನೀಡುವುದು ಹೇಗೆ ಸಾಧ್ಯ? ಇದನ್ನು ಗಮನಿಸಿದಾಗ ಅವರ ಹಿಂದೆ ಪ್ರಬಲ ಕೈಗಳಿವೆ ಎಂದು ಅರ್ಥವಾಗುತ್ತದೆ. ಕೂಡಲೇ ಅವನ ವಿರುದ್ಧ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವಕೀಲ ಬಿ.ಎಲ್.ನಾಗರಾಜ್ ಮಾತನಾಡಿ, ಆರೆಸ್ಸೆಸ್ ಮತ್ತು ಅದರ ಮಿತ್ರ ಗುಂಪುಗಳು ಕೋಮು ದ್ವೇಷವನ್ನು ಹರಡುತ್ತಿವೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಕೇಂದ್ರ ಸರಕಾರ ‘ಭಿನ್ನ ವರ್ತನೆ’ ತೋರುತ್ತಿದೆ. ಸಿಜೆಐ ಮೇಲೆ ಶೂ ಎಸೆದ ದಾಳಿಕೋರನು ಬೇರೆ ಧರ್ಮ-ನಂಬಿಕೆಗೆ ಸೇರಿದವನಾಗಿದ್ದರೆ, ಅವನು ಈಗ ಜೈಲಿನಲ್ಲಿರುತ್ತಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಉಮಾಪತಿ ಮಾತನಾಡಿ, ದಲಿತ ಸಮುದಾಯಕ್ಕೆ ಸೇರಿದ ನ್ಯಾ.ಗವಾಯಿ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸುವ ನಿಟ್ಟಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು ಸಹಿಸಲಾಗದ ಮನುವಾದಿ ಮನಸ್ಸುಗಳು ಇಂತಹ ಪ್ರಾಮಾಣಿಕ ನ್ಯಾಯಾಧೀಶರ ಮೇಲೆ ದ್ವೇಷ ಕಾರುವ ಕೆಲಸಕ್ಕೆ ಮುಂದಾಗಿರುವುದು. ದ್ವೇಷ, ಅಸಹನೆಯನ್ನು ಹುಟ್ಟು ಹಾಕುತ್ತಿರುವ ಸಂಘ ಪರಿವಾರ ಮತ್ತು ಮನುವಾರಿ ಮನಸ್ಥಿತಿಯನ್ನು ಹೊಂದಿರುವ ಈ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ವಕೀಲರಾದ ಸುಭಾಷ್, ರಂಗನಾಥ್, ಕಾಶೀನಾಥ್, ವಿನಯ್ ಶ್ರೀನಿವಾಸ್, ಭೀಮಾಪುತ್ರಿ, ಹೋರಾಟಗಾರ ಹೆನ್ನೂರು ಶ್ರೀನಿವಾಸ್, ಪುರುಷೋತ್ತಮ ದಾಸ್, ನಾಗೇಶ್ ಅರಳಕುಪ್ಪೆ, ಶಿವಶಂಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News