ರಾಜ್ಯಾದ್ಯಂತ ‘ಎಸ್‍ಐಆರ್ ನಿಲ್ಲಲಿ’ ಕೂಗು: ಬೆಂಗಳೂರು ಸೇರಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‍ಐಆರ್) ವಿರೋಧಿಸಿ ರಾಜಧಾನಿ ಬೆಂಗಳೂರು, ಕೊಪ್ಪಳ, ವಿಜಯಪುರ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ತಾಲೂಕು ಕೇಂದ್ರಗಳಲ್ಲಿ ಶನಿವಾರ ವಿವಿಧ ಸಂಘಟನೆಗಳ ನಾಯಕರು, ಸಾಹಿತಿಗಳು, ಚಿಂತಕರು ಸೇರಿ ಎಸ್‍ಐಆರ್ ನಿಲ್ಲಿಸಬೇಕು ಎಂದು ಒತ್ತಾಯಿಸಿ ಧರಣಿ, ರ್ಯಾಲಿ, ಹೋರಾಟ ನಡೆಸಿದರು.
ಶನಿವಾರ ‘ಎಸ್‍ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು-ಜನಪರ ಸಂಘಟನೆಗಳ ಒಕ್ಕೂಟ’ದ ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿತ್ತು. ‘ಕೇಂದ್ರ ಚುನಾವಣಾ ಆಯೋಗ ಈಗಾಗಲೇ ವಿವಿಧ ರಾಜ್ಯಗಳಲ್ಲಿ ನಡೆಸಿದ ಸ್ವರೂಪದಲ್ಲಿಯೇ ‘ಎಸ್‍ಐಆರ್’ ಅನ್ನು ಕರ್ನಾಟಕದಲ್ಲಿ ಜಾರಿ ಮಾಡಲು ಬಿಡುವುದಿಲ್ಲ. ಚುನಾವಣಾ ಆಯೋಗ ಕನಿಷ್ಠ ನಾಲ್ಕು ಬದಲಾವಣೆಗಳನ್ನು ಒಪ್ಪಲೇಬೇಕು. ಬಂಗಾಳದಲ್ಲಿ ಮಾಡಿದಂತೆ ತಾರ್ಕಿಕ ವ್ಯತ್ಯಾಸ ಸಾಫ್ಟ್ ವೇರ್ ಅನ್ನು ಬಳಸಿ ಮತದಾರರನ್ನು ಪಟ್ಟಿಯಿಂದ ಹೊರಗಿಡುವ ಕೆಲಸ ಕರ್ನಾಟಕದಲ್ಲಿ ನಡೆಯಬಾರದು. ಕರಡು ಪಟ್ಟಿ ತಯಾರಾದ ನಂತರ ಕಡ್ಡಾಯವಾಗಿ ಗ್ರಾಮಸಭೆ ಕರೆದು ಸಾರ್ವಜನಿಕ ಪರಿಶೀಲನೆ ನಡೆಸಿಯೇ ಪಟ್ಟಿಯನ್ನು ಅಂತಿಮಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತದಾರರ ಪಟ್ಟಿಯನ್ನು ಮೆಷಿನ್ ರೀಡಬಲ್ ಫಾಮ್ರ್ಯಾಟಿನಲ್ಲಿ ಕೊಡುವ ಮೂಲಕ ಪಾರದರ್ಶಕತೆ ಪಾಲಿಸಬೇಕು. ಮನವಿ ಸಲ್ಲಿಸಲು ಹಾಗೂ ಅಗತ್ಯ ದಾಖಲೆ ಒದಗಿಸಲು ಕನಿಷ್ಟ 6 ತಿಂಗಳ ಸಮಯವಕಾಶ ಒದಗಿಸಬೇಕು. ಈ ನಾಲ್ಕು ಪ್ರಜಾತಾಂತ್ರಿಕ ಹಾಗೂ ಜನಸ್ನೇಹಿ ಕ್ರಮಗಳಿಗೆ ಒಪ್ಪಿದರೆ ಕರ್ನಾಟಕ ನಾಗರಿಕ ಸಮಾಜ ಮತದಾರರ ಪರಿಷ್ಕರಣೆಗೆ ಸಹಕಾರ ನೀಡುತ್ತದೆ. ಒಂದು ವೇಳೆ ಇದನ್ನು ಒಪ್ಪದೆ ತಾನು ಅಂದುಕೊಂಡದ್ದನ್ನೇ ಹೇರಲು ಮುಂದಾದರೆ, ಅಸಹಕಾರವನ್ನು ಎದುರಿಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ರಾಜ್ಯ ಸರಕಾರವೂ ಮತದಾರರ ಹಿತ ಕಾಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಶೇಷ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ಕರೆದು ಮತದಾರರ ಪಟ್ಟಿಯ ಮುಕ್ತ ಪರಿಶೀಲನೆ ಮಾಡಬೇಕು. ಅರ್ಹ ಮತದಾರರಿಗೆ ಸ್ಮಾರ್ಟ್‍ಕಾರ್ಡ್ ನೀಡಬೇಕು. ದಾಖಲೆ ಇಲ್ಲದವರಿಗೆ ದಾಖಲೆ ಒದಗಿಸುವ ಕೆಲಸ ಮಾಡಬೇಕು. ಚುನಾವಣಾ ಆಯೋಗ 15 ದಿನದೊಳಗೆ ನಮ್ಮ ಆಗ್ರಹಕ್ಕೆ ಸಕರಾತ್ಮಕವಾಗಿ ಸ್ಪಂದಿಸದೇ, ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ, ಎಸ್‍ಐಆರ್ ತರಬೇತಿ ಪ್ರಾರಂಭವಾಗುವ ಜೂ.20ರಂದು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಅಂಕಣಕಾರ ಶಿವಸುಂದರ್, ಹೋರಾಟಗಾರರಾದ ನೂರ್ ಶ್ರೀಧರ್, ಕೆ.ವಿ.ಭಟ್, ವಿನಯ್ ಶ್ರೀನಿವಾಸ್, ಅರುಣ್ ಲೂಯಿಸ್, ಯೂಸಫ್ ಕನ್ನಿ, ಅಮ್ಜದ್ ಪಾಷಾ, ನಿಷಾ ಗೂಳೂರು, ಸುರೇಶ್ ಬೆಲ್ಲಮಕೊಂಡ, ಮಲ್ಲಿಗೆ ಸಿರಿಮನೆ, ತಾಹೇರ್ ಹುಸೇನ್, ರಘುನಂದನ್, ರವಿ ಮೋಹನ್, ನಾಗೇಶ್ ಅರಳಕುಪ್ಪೆ, ತನ್ವೀರ್ ಅಹ್ಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.