ಟಿಪ್ಪು ಸುಲ್ತಾನ್ ಶೌರ್ಯದ ಬಗ್ಗೆ 233 ವರ್ಷದ ಹಿಂದೆಯೇ ಆಂಗ್ಲ ಪತ್ರಿಕೆಯಲ್ಲಿ ವರದಿ ಪ್ರಕಟ
ಬೆಂಗಳೂರು : ಇಂಗ್ಲೆಂಡ್‌ನ ಪ್ರತಿಷ್ಠಿತ ‘ದಿ ಮೇಲ್ ಆರ್ ಕಾಪಿಯರ್ ಡೈಲಿ ಅಡ್ವಟೈಸರ್’ ಇಂಗ್ಲಿಷ್ ದಿನ ಪತ್ರಿಕೆಯಲ್ಲಿ ಮೈಸೂರು ಹುಲಿ ‘ಟಿಪ್ಪು ಸುಲ್ತಾನ್’ ಅವರ ಕುರಿತು ಪ್ರಕಟವಾಗಿದ್ದ ವರದಿಯನ್ನು ಸಂಶೋಧಕರೊಬ್ಬರು ಸಂಗ್ರಹಿಸಿದ್ದು, ನೋಡುಗರ ಗಮನ ಸೆಳೆದಿದೆ.
1792ರ ಫೆ.11ರಂದು ಪತ್ರಿಕೆಯಲ್ಲಿ 3ನೇ ಆಂಗ್ಲೋ-ಮೈಸೂರು ಯುದ್ಧ ಮತ್ತು ಟಿಪ್ಪು ಸುಲ್ತಾನ್ ಕುರಿತು ಅಂದಿನ ಬ್ರಿಟಿಷ್ ಅಧಿಕಾರಿ ಲಾರ್ಡ್ ಕಾರ್ನ್‌ವಾಲೀಸ್, ಗೌರ್ನರ್ ಜನರಲ್‌ಗೆ ಬರೆದಿರುವ ಅನೇಕ ಪತ್ರಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಜತೆಗೆ, ಇದರಲ್ಲಿ ಟಿಪ್ಪುವಿನ ಪರಾಕ್ರಮದ ಆಸಕ್ತಿದಾಯಕ ವಿಷಯಗಳಿದ್ದು, ಇದೀಗ 233 ವರ್ಷಗಳ ಹಿಂದೆ ಪ್ರಕಟವಾಗಿದ್ದ ಪತ್ರಿಕೆ ಮೂಲ ಪ್ರತಿಯನ್ನು ಸಂಶೋಧಕರು ಸಂಗ್ರಹಿಸಿದ್ದಾರೆ.
ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಆಂಗ್ಲೋ-ಮೈಸೂರು ಯುದ್ಧದ ಬಗ್ಗೆ ವಿಸ್ತಾರ ಮಾಹಿತಿಯನ್ನು ನಮೂದಿಸಲಾಗಿದೆ. ಒಂದು ಪತ್ರದಲ್ಲಿ 30 ಸಾವಿರ ಸೈನಿಕರ ಜೊತೆ ಟಿಪ್ಪು ಸುಲ್ತಾನ್, ಆರ್ಕಾಟಿಕ್‌ನಿಂದ ಕರ್ನಾಟಿಕ್ ಪ್ರದೇಶದತ್ತ ಬರುತ್ತಿರುವುದು, ಬೆಂಗಳೂರು ಮತ್ತು ಶ್ರೀರಂಗಪಟ್ಟಣ ಸಮೀಪ ತನ್ನ ಸೈನಿಕರೊಂದಿಗೆ ಶಿಬಿರಕ್ಕೆ ಬಂದಿರುವುದು ಮತ್ತು ಟಿಪ್ಪುವಿನ ವಿರುದ್ಧ ಹೋರಾಟ ಕೈಗೊಂಡರೆ ಮುಂದೆ ಉಂಟಾಗಬಹುದಾದ ಪರಿಣಾಮ ಬಗ್ಗೆ ಗೌರ್ನರ್ ಜನರಲ್‌ಗೆ ಬರೆದಿರುವ ಪತ್ರದಲ್ಲಿ ಲಾರ್ಡ್ ಕಾರ್ನ್‌ವಾಲೀಸ್ ಉಲ್ಲೇಖಿಸಿದ್ದರು. ಇದನ್ನು ಪತ್ರಿಕೆಯಲ್ಲಿ ವಿವರವಾಗಿ ಪ್ರಕಟಿಸಿರುವುದು ವಿಶೇಷ.
ಪತ್ರಿಕೆ ಮೂಲ ಪ್ರತಿ ಸಂಗ್ರಹಕಾರರೊಬ್ಬರ ಬಳಿ ಇದೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ ಇದೆ. ಅಪರೂಪದ ದಾಖಲೆಯಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯವರು ಇದನ್ನು ರಕ್ಷಿಸಿ ಇಡಬೇಕೆಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.