Photo credit : X@DKShivakumar

ಬೆಂಗಳೂರು : ಜನಪ್ರತಿನಿಧಿಗಳು, ಪ್ರಭಾವಿಗಳು ಹಾಗೂ ಜನಸಾಮಾನ್ಯರು ಎಲ್ಲರನ್ನೂ ಪೊಲೀಸರು ಒಂದೇ ರೀತಿಯಲ್ಲಿ ಕಾಣಬೇಕು. ಸಂವಿಧಾನ ಹಾಗೂ ಕಾನೂನುಗಳ ಅನ್ವಯ, ಕಾನೂನು ಸುವ್ಯವಸ್ಥೆ ಪೊಲೀಸರ ಆದ್ಯತೆಯಾಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ.

ಬುಧವಾರ ನಗರದ ಮೈಸೂರು ರಸ್ತೆಯ ಸಶಸ್ತ್ರ ಮೀಸಲು ಪಡೆಯ ಮುಖ್ಯ ಮೈದಾನದಲ್ಲಿ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 7,900ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಪೊಲೀಸರ ವಸತಿಗೂ ಅನೇಕ ಕಾರ್ಯಕ್ರಮ ರೂಪಿಸಿ ಹಣ ಒದಗಿಸಲು ಬದ್ಧರಾಗಿದ್ದೇವೆ. ಈಗಾಗಲೇ ಪೊಲೀಸ್ ವಸತಿ ಯೋಜನೆಯಡಿ ಸಾಕಷ್ಟು ಮನೆಗಳನ್ನು ನಿರ್ಮಿಸಲಾಗಿದೆ. ಅದೇ ರೀತಿ ಹೊಸ ವಾಹನಗಳ ಖರೀದಿ, ತಂತ್ರಜ್ಞಾನದ ವ್ಯವಸ್ಥೆಗೂ ಬಜೆಟ್‍ನಲ್ಲಿ ಅನುದಾನ ಮೀಸಲಿಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ರೌಡಿ ಪಡೆ ಮಟ್ಟ ಹಾಕಲು ವಿಶೇಷ ತಂಡ ರಚನೆಗೆ ಈಗಾಗಲೇ ಸೂಚನೆ ಕೊಡಲಾಗಿದೆ. ಜನಸಾಮಾನ್ಯರಿಗೆ ನೆಮ್ಮದಿಯ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲಾ ರೀತಿಯ ನೆರವು ಹಾಗೂ ಸಹಕಾರ ನೀಡಲಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಪೊಲೀಸ್ ಆಯುಕ್ತಾಲಯವನ್ನು ಐದು ಆಯುಕ್ತಾಲಯವನ್ನಾಗಿ ವಿಭಜಿಸುತ್ತಿರುವುದಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸಮಾಧಾನವಿಲ್ಲ ಎಂಬುದು ತಿಳಿದಿದೆ. ಆದರೆ, ನಗರದ ಜನಸಂಖ್ಯೆ ಹೆಚ್ಚಾಗಿರುವುದರಿಂದ ಆಡಳಿತಾತ್ಮಕ ಹಾಗೂ ಕಾರ್ಯನಿರ್ವಹಣೆಯ ಕಾರಣಕ್ಕೆ ಈ ನಿರ್ಧಾರ ಅನಿವಾರ್ಯವಾಗಿತ್ತು. ಸರಕಾರ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ, ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಸೂಚಿಸಿದರು.

ಹುತಾತ್ಮ ಪೊಲೀಸರಿಗೆ ಗೌರವ, ಸಂತಾಪ ಸೂಚಿಸುವುದಷ್ಟೇ ನಮ್ಮ ಉದ್ದೇಶವಾಗಬಾರದು. ಅವರು ತೋರಿದ ಕರ್ತವ್ಯ ನಿಷ್ಠೆ, ತ್ಯಾಗ ಮತ್ತು ಜನಸೇವೆಯ ಮೌಲ್ಯಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಆದ್ಯತೆಯಾಗಬೇಕು. ತಮ್ಮ ಬದುಕನ್ನೇ ಸಮಾಜದ ರಕ್ಷಣೆಗಾಗಿ ಮುಡುಪಾಗಿಟ್ಟ ಮಹಾನ್ ಜೀವಗಳಿಗೆ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆ. 1959ರಲ್ಲಿ ಚೀನಾದ ದಾಳಿಯಲ್ಲಿ ಹುತಾತ್ಮರಾದ 10 ಮಂದಿ ಪೊಲೀಸರ ಬಲಿದಾನದ ಸ್ಮರಣಾರ್ಥ ಪೊಲೀಸ್ ಸಂಸ್ಮರಣಾ ದಿನವನ್ನು ಆಚರಿಸಲಾಗುತ್ತಿದೆ, ಆ ಪರಂಪರೆಯನ್ನು ನಾವು ಇಂದಿಗೂ ಮುಂದುವರೆಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor