Photo credit : PTI

ಬೆಂಗಳೂರು : ಭಾರತೀಯ ಸೇನೆಗೆ ಯುವಕರನ್ನು ಸೇರ್ಪಡೆಗೊಳಿಸುವ ಸಲುವಾಗಿ ಬೆಂಗಳೂರು ನೇಮಕಾತಿ ಕಾರ್ಯಾಲಯದ ವತಿಯಿಂದ ಅ.31 ರಿಂದ ನ.3ರವರೆಗೆ ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿಯನ್ನು (ಪುರುಷರಿಗೆ) ಹಮ್ಮಿಕೊಳ್ಳಲಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ವಯೋಮಿತಿ, ಶೈಕ್ಷಣಿಕ ಅರ್ಹತೆ ಸೇರಿದಂತೆ ಇತರ ಪ್ರಮುಖ ಮಾನದಂಡಗಳ ವಿವರಗಳನ್ನು ಬೆಂಗಳೂರು ನೇಮಕಾತಿ ಕಾರ್ಯಾಲಯವು ಫೆ.13ರಂದೇ ಪ್ರಕಟಿಸಿತ್ತು.

ಪ್ರಮುಖ ಮುಖ್ಯಾಂಶಗಳು :

ಆನ್‍ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಶಾರ್ಟ್‍ಲಿಸ್ಟ್ ಆಗಿರುವ ಅಭ್ಯರ್ಥಿಗಳಿಗೆ ಈಗಾಗಲೇ ಪ್ರವೇಶ ಪತ್ರಗಳನ್ನು ವಿತರಿಸಲಾಗಿದೆ. ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್‍ಸೈಟ್ (www.joinindianarmy.nic.in) ಮೂಲಕ ತಮ್ಮ ಪ್ರೊಫೈಲ್ ಲಾಗಿನ್ ಆಗಿ ಅಥವಾ ನೋಂದಾಯಿತ ಇಮೇಲ್ ಐಡಿ ಪರಿಶೀಲಿಸಿ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು.

ಅರ್ಹ ಜಿಲ್ಲೆಗಳು :

ಜೂ.1 ರಿಂದ 12ರವರೆಗೆ ನಡೆದ ಆನ್‍ಲೈನ್ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ಬೆಂಗಳೂರು ದಕ್ಷಿಣ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ.

ಆಯ್ಕೆ ಪ್ರಕ್ರಿಯೆ :

ಆನ್‍ಲೈನ್ ಪ್ರವೇಶ ಪರೀಕ್ಷೆ, ರ‍್ಯಾಲಿ ಸ್ಥಳದಲ್ಲಿ ನಡೆಯುವ ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗಳು ಮತ್ತು ಅಂತಿಮ ಮೆರಿಟ್ ಪಟ್ಟಿ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಮಧ್ಯವರ್ತಿಗಳ ಬಗ್ಗೆ ಎಚ್ಚರ :

ಸೇನಾ ನೇಮಕಾತಿಯು ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳು ಯಾವುದೇ ದಲ್ಲಾಳಿಗಳು, ಮಧ್ಯವರ್ತಿಗಳು ಅಥವಾ ವಂಚಕರ ಆಮಿಷಗಳಿಗೆ ಬಲಿಯಾಗಬಾರದು ಎಂದು ಪ್ರಕಟಣೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor