‘ಆರೆಸ್ಸೆಸ್ ಪುರುಷ ಪ್ರಧಾನ ಸಂಘಟನೆ’; ರಾಹುಲ್ ಹೇಳಿಕೆಯನ್ನು ‘ಪರಿವಾರ’ದವರು ವಿಶಾಲ ದೃಷ್ಟಿಯಿಂದ ನೋಡಬೇಕು : ಆನಂದ ಕುಮಾರ್
ಡಾ.ಆನಂದ ಕುಮಾರ್
ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಮಹಿಳೆಯರನ್ನು ಪುರುಷರ ಅಧೀನದಲ್ಲಿಡುವ ಪುರುಷ ಪ್ರಧಾನ ಸಂಘಟನೆ ಎಂಬ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿಕೆ ಅತ್ಯಂತ ಸಕಾಲಿಕವಾಗಿದ್ದು, ಮಹಿಳೆಯರ ಸಬಲೀಕರಣ ಎಂಬುದು ಭಾಷಣ, ಘೋಷಣೆ, ಆರಾಧನೆಗೆ ಸೀಮಿತವಾಗಬಾರದು. ಅದು ಅಧಿಕಾರ ಹಂಚಿಕೆ, ಸಮಾನ ಅವಕಾಶ, ಸ್ವತಂತ್ರ ನಿರ್ಧಾರ ಮತ್ತು ನಾಯಕತ್ವದಲ್ಲಿ ಮಹಿಳೆಯರ ಸ್ಥಾನಮಾನ ಪ್ರತಿಫಲಿಸುವಂತಿರಬೇಕು ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ.ಆನಂದ ಕುಮಾರ್ ಹೇಳಿದ್ದಾರೆ.
ಬುಧವಾರ ಪ್ರಕಟಣೆ ನೀಡಿರುವ ಅವರು, ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾಗದ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗ್ಗೆ ಬಹುಕಾಲ ಅನಾದರಣೆ ಹೊಂದಿದ್ದ ಆರೆಸ್ಸೆಸ್ ಈವರೆಗೆ ಮಹಿಳೆಯರಿಗೆ ಸಮಾನ ಅವಕಾಶವನ್ನೆ ನೀಡಿಲ್ಲ. ಶೋಷಿತ ಸಮುದಾಯಗಳಿಗೂ ಪ್ರಾತಿನಿಧ್ಯ ಕಲ್ಪಿಸಿಲ್ಲ. ಮನುಸ್ಮೃತಿ, ಮನುವಾದಿ ಸಿದ್ಧಾಂತ ಆಚರಿಸುವ ಆರೆಸ್ಸೆಸ್ ಬಗ್ಗೆ ಜಾಗತಿಕವಾಗಿ ವಿರೋಧದ ಧ್ವನಿ ಕೇಳಿ ಬರುತ್ತಿದೆ. ರಾಹುಲ್ ಗಾಂಧಿ ವಿಚಾರವನ್ನು ಟೀಕೆ ಎಂದು ಭಾವಿಸದೇ ಸಂಘ ಪರಿವಾರದವರು ವಿಶಾಲ ಮನೋಭಾವದಿಂದ ನೋಡಿ, ಪರಿವಾರದ ಸಂಘಟನೆಯಲ್ಲಿ ಬದಲಾವಣೆಗೆ ಇದು ಸಕಾಲ ಎಂದು ಸಲಹೆ ನೀಡಿದ್ದಾರೆ.
ಮಹಿಳೆ ಅನುಯಾಯಿ ಅಲ್ಲ, ನಿರ್ಧಾರ ರೂಪಿಸುವ ನಾಯಕಿಯಾಗಬೇಕು. ಮಹಿಳೆಯರಿಗೆ ಗೌರವ ನೀಡುವುದು ಎಂದರೆ ಅವರ ಪರವಾಗಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವುದಲ್ಲ. ಅವರೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಅಧಿಕಾರವನ್ನು ಒಪ್ಪಿಕೊಳ್ಳುವುದು ಮುಖ್ಯ. ಮಹಿಳೆಯರಿಗೆ ವೇದಿಕೆ ನೀಡಿ, ಅಲ್ಲಿ ಅವರ ಧ್ವನಿಗೆ ನಿರ್ಧಾರ ಬದಲಿಸುವ ಶಕ್ತಿ ಇರಬೇಕು. ಮಹಿಳೆಯನ್ನು ಪೂಜಿಸುವ ಸಮಾಜಕ್ಕಿಂತ, ಮಹಿಳೆಯನ್ನು ಸಮಾನ ಹಕ್ಕುಗಳಿರುವ ನಾಯಕಿಯಾಗಿ ಸ್ವೀಕರಿಸುವ ಸಮಾಜವೇ ನಿಜವಾದ ಪ್ರಗತಿಪರ ಸಮಾಜ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿಯ ಆರಾಧನೆಗೆ ವಿಶಿಷ್ಟ ಸ್ಥಾನವಿದೆ. ಆದರೆ ಶಕ್ತಿಯನ್ನು ಆರಾಧಿಸುವುದಕ್ಕೂ ಮಹಿಳೆಗೆ ತನ್ನ ಬದುಕಿನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸ್ವಾತಂತ್ರ್ಯ ನೀಡುವುದಕ್ಕೂ ವ್ಯತ್ಯಾಸವಿದೆ. ಶಿಕ್ಷಣ, ಉದ್ಯೋಗ, ಆರ್ಥಿಕ ಸ್ವಾವಲಂಬನೆ, ಆಸ್ತಿಯ ಮೇಲಿನ ಹಕ್ಕು, ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ನಾಯಕತ್ವದ ಅವಕಾಶಗಳು ನೈಜ ಸಬಲೀಕರಣದ ಪ್ರಮುಖ ಸೂಚಕಗಳು ಎಂದು ಅವರು ಪ್ರತಿಪಾದಿಸಿದ್ದಾರೆ.
ಮಹಿಳೆಯರನ್ನು ರಕ್ಷಿಸಬೇಕಾದವರಂತೆ ಮಾತ್ರ ನೋಡುವ ಬದಲು, ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಲ್ಲ ಸಮಾನ ನಾಗರಿಕರಂತೆ ಗೌರವಿಸಬೇಕು. ಇವುಗಳನ್ನು ವಾಸ್ತವಾಂಶಗಳ ಆಧಾರದಲ್ಲಿ ಪರಿಶೀಲಿಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ. ಸಂಘಟನೆಯ ನಿರ್ಧಾರ ಪ್ರಕ್ರಿಯೆಯಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ಸ್ಪಷ್ಟ ಮಾಹಿತಿ ನೀಡಿದರೆ ರಾಹುಲ್ ಗಾಂಧಿ ಎತ್ತಿರುವ ಚರ್ಚೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಪ್ರಶ್ನೆಗಳಿಗೆ ವಾಸ್ತವಾಂಶಗಳ ಮೂಲಕ ಉತ್ತರಿಸುವುದು ಸಂಘಟನೆಗಳ ಜವಾಬ್ದಾರಿ ಎಂದು ಆನಂದ ಕುಮಾರ್ ಹೇಳಿದ್ದಾರೆ.