ಕಾಂಗ್ರೆಸ್ ಸರಕಾರದಿಂದ ರೈತರಿಗೆ ದ್ರೋಹ : ಛಲವಾದಿ ನಾರಾಯಣಸ್ವಾಮಿ
"ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಸಿಬಿಐಗೆ ವಹಿಸಿ"
ಬೆಂಗಳೂರು: “ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೇವಲ 2,500 ರೂ. ಪರಿಹಾರಧನ ಘೋಷಿಸಿದ ಸರ್ಕಾರವು ಒಂದು ರೂಪಾಯಿಯನ್ನೂ ಅವರ ಖಾತೆಗೆ ಅವರ ಖಾತೆಗೆ ಹಾಕದೇ ಇರುವುದು ರಾಜಕೀಯವೇ?” ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.
ಮಂಗಳವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾವು ಪ್ರತಿ ಹೆಕ್ಟೇರ್ಗೆ 25 ಸಾವಿರ ರೂ. ಪರಿಹಾರ ನೀಡಬೇಕೆಂದು ಬೇಡಿಕೆ ಇಟ್ಟರೆ ಅದು ರಾಜಕೀಯವೇ? ಪರಿಹಾರ ಘೋಷಿಸಿ, ನಾವು ಬರುತ್ತೇವೆ, ಕೇಂದ್ರದ ಬಳಿ ಹೋಗೋಣ. ಮೊದಲು ಎಸ್ಡಿಆರ್ಎಫ್ನಿಂದ ಪರಿಹಾರ ನೀಡಲಿ; ಬಳಿಕ ಎನ್ಡಿಆರ್ಎಫ್ನ ಹಣ ಕೇಳೋಣ ಎಂದು ಹೇಳಿದ್ದೇವೆ” ಎಂದು ತಿಳಿಸಿದರು. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ರೈತರಿಗೆ ದ್ರೋಹ ಮಾಡಿದೆ ಎಂದು ಅವರು ಆಕ್ಷೇಪಿಸಿದರು.
ಭಿಕ್ಷಾಪಾತ್ರೆ ಹಿಡಿದು ನಿಂತಿದ್ದಾರೆ :
“ನಿಯೋಗ ತೆರಳುವುದಿಲ್ಲ ಎಂದು ನಾವು ಹೇಳಿಲ್ಲ. ಆದರೆ, ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ. ಸರ್ಕಾರ ದಿವಾಳಿಯಾಗಿದೆಯೇ?” ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.
ಸರ್ಕಾರದವರು ಶ್ರೀಮಂತಿಕೆ ಮೆರೆಯುವ ರೀತಿಯಲ್ಲಿ ಮಾತನಾಡುತ್ತಾರೆ. ಆದರೆ, ಇಲ್ಲಿ ಭಿಕ್ಷಾಪಾತ್ರೆ ಹಿಡಿದು ನಿಂತಿರುವಂತಾಗಿದೆ. ಅವರ ಆರ್ಥಿಕ ಸ್ಥಿತಿ ಏನೆಂಬುದು ನಮಗೆ ಗೊತ್ತಾಗಿದೆ ಎಂದು ಟೀಕಿಸಿದರು.
“ಭಿಕ್ಷೆಯಾದರೂ ಎತ್ತಿ, ಆದರೆ ರೈತರ ಸಮಸ್ಯೆಗೆ ಸ್ಪಂದಿಸಿ. ಕೇವಲ ಕೇಂದ್ರಕ್ಕೆ ಲವ್ ಲೆಟರ್ ಬರೆಯುವುದರಿಂದ ಪ್ರಯೋಜನವಿಲ್ಲ” ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಕ್ಷಣ ಸ್ಪಂದಿಸಿ ಸಭೆ ನಡೆಸಿ ಮಾತುಕತೆ ನಡೆಸಿದ್ದಾರೆ. ಇದರಿಂದ ಹೋರಾಟವೂ ಸ್ಥಗಿತಗೊಂಡಿದೆ. ಆದರೆ, ರಾಜ್ಯ ಸರ್ಕಾರದಿಂದ ಕೇವಲ ಹೇಳಿಕೆಗಳು ಮತ್ತು ಪತ್ರ ಬರೆಯುವ ಕೆಲಸವಷ್ಟೇ ನಡೆಯುತ್ತಿದೆ ಎಂದು ದೂರಿದರು.
ರೈತರ ಆತ್ಮಹತ್ಯೆ ತಡೆಯಲು 10 ಸಾವಿರ ರೂ. ನೀಡಿ :
ರೈತರ ಆತ್ಮಹತ್ಯೆ ತಡೆಯಲು ತಲಾ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ರೈತರಿಗೆ ಒಂದು ರೂಪಾಯಿಯನ್ನೂ ನೀಡದ ಸರ್ಕಾರ ನಾಟಕ ಮಾಡುವ ಸರ್ಕಾರವಾಗಬಾರದು; ಸಮಸ್ಯೆಗಳನ್ನು ಪರಿಹರಿಸುವ ಸರ್ಕಾರವಾಗಬೇಕು ಎಂದರು.
ಸರ್ಕಾರದ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮೂರನೆಯವರು ಬರುತ್ತಾರೋ, ನಾಲ್ಕನೆಯವರು ಬರುತ್ತಾರೋ ಎಂದು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ಟಿಂಗ್ ಆಪರೇಷನ್ ವಿಚಾರವನ್ನು ಸಿಬಿಐಗೆ ವಹಿಸಿ :
ಸ್ಟಿಂಗ್ ಆಪರೇಷನ್ ವಿಚಾರವಾಗಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಯಾರ ಖಾಸಗಿ ಜೀವನದಲ್ಲೂ ಯಾರೂ ನುಸುಳಬಾರದು. ರಾಜಕೀಯ ಮಾಡುವುದಾದರೆ ಸಾಮಾಜಿಕ ನ್ಯಾಯ ಒದಗಿಸಲು ಮತ್ತು ದೇಶದ ಸಮಸ್ಯೆಗಳನ್ನು ಪರಿಹರಿಸಲು ಮಾಡಬೇಕು ಎಂದು ಹೇಳಿದರು.
“ಕ್ಯಾಮೆರಾ ಹಿಡಿದು ಬೆಡ್ರೂಮ್ಗೆ ನುಗ್ಗುವುದು ಸರ್ಕಾರದ ಕೆಲಸವಲ್ಲ. ಕೆಸರೆರಚಾಟ ನಿಲ್ಲಿಸಿ, ಈ ಪ್ರಕರಣವನ್ನು ಸಿಬಿಐಗೆ ವಹಿಸಿ” ಎಂದು ಆಗ್ರಹಿಸಿದರು.
ಗೃಹ ಸಚಿವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದಾರೆಯೇ? :
ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಗೃಹ ಸಚಿವರು ಕೇವಲ ಮಾತನಾಡಿದರೆ ಸಾಲದು. ಅವರು ಯಾರನ್ನು ರಕ್ಷಿಸಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ ಛಲವಾದಿ ನಾರಾಯಣಸ್ವಾಮಿ, ಗೃಹ ಸಚಿವ ಸ್ಥಾನದಲ್ಲಿರುವವರು ಶ್ರದ್ಧೆ ಮತ್ತು ನಿಷ್ಪಕ್ಷಪಾತದಿಂದ ನಡೆದುಕೊಳ್ಳಬೇಕು ಎಂದರು.
“ಗೃಹ ಸಚಿವರು ನಿಷ್ಪಕ್ಷಪಾತವಾಗಿ ಇದ್ದಾರೆಯೇ? ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ವಿಡಿಯೋಗಳ ಮೂಲ ಮತ್ತು ಅದರ ಹಿಂದಿರುವವರ ಬಗ್ಗೆ ತನಿಖೆ ನಡೆಸಿದ್ದೀರಾ?” ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವೇ ಸ್ಟಿಂಗ್ ಆಪರೇಷನ್ಗಳ ಕಾರ್ಖಾನೆ :
ಕಾಂಗ್ರೆಸ್ ಪಕ್ಷವೇ ಸ್ಟಿಂಗ್ ಆಪರೇಷನ್ಗಳ ಕಾರ್ಖಾನೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಕಚೇರಿಯಲ್ಲಿದ್ದ ಈ ಕಾರ್ಖಾನೆ ಈಗ ಸರ್ಕಾರಕ್ಕೆ ಸ್ಥಳಾಂತರಗೊಂಡಿದೆ ಎಂದು ಟೀಕಿಸಿದರು. “ನನ್ನನ್ನು ಬಿಟ್ಟು, ನಿನ್ನನ್ನು ಬಿಟ್ಟು ಕಳ್ಳ ಯಾರು ಎಂಬಂತಾಗಿದೆ ಇವರ ಪರಿಸ್ಥಿತಿ. ಪ್ರತಿಯೊಬ್ಬರೂ ಕಳ್ಳರಾದಾಗ ಯಾರೂ ಬಾಯಿ ಬಿಡುವುದಿಲ್ಲ” ಎಂದು ವ್ಯಂಗ್ಯವಾಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಅವಿವೇಕದ ಮಾತುಗಳನ್ನಾಡುತ್ತಿದ್ದಾರೆ. ಅವರು ಗೃಹ ಸಚಿವರಾಗಿ ಮುಂದುವರಿಯಲು ನಾಲಾಯಕ್ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
“ವಿಷಯದ ಬಗ್ಗೆ ಜ್ಞಾನವಿಲ್ಲದಿದ್ದಾಗ ತಪ್ಪಿಸಿಕೊಳ್ಳಲು ವಾಚಾಳಿತನ ಪ್ರದರ್ಶಿಸುತ್ತಾರೆ. ಹಿಂದೆ ಆರ್ಡಿಪಿಆರ್ ಸಚಿವರಾಗಿದ್ದಾಗಲೂ ಖಾತೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿರಲಿಲ್ಲ. ಈಗ ಗೃಹ ಸಚಿವರ ಜವಾಬ್ದಾರಿ ಏನೆಂಬುದನ್ನು ಅವರು ಅರ್ಥಮಾಡಿಕೊಂಡಿಲ್ಲ” ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆ ಅವರ ಪ್ರದೇಶದಲ್ಲೇ ಹಲವು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದ ಅವರು, “ಗೃಹ ಸಚಿವ ಎಂದು ಹೇಳಿಕೊಳ್ಳುವ ಅವರು ಘಟನೆ ನಡೆದ ಸ್ಥಳಗಳಿಗೆ ತೆರಳಿ ಸಂತ್ರಸ್ತರನ್ನು ಅಥವಾ ಸಂಬಂಧಪಟ್ಟವರನ್ನು ಭೇಟಿಯಾಗಿದ್ದಾರೆಯೇ?” ಎಂದು ಪ್ರಶ್ನಿಸಿದರು.