Bengaluru | ಗಡಿಪಾರು ಆದೇಶ ಉಲ್ಲಂಘಿಸಿ ಬೆಂಗಳೂರಿಗೆ ವಾಪಸ್: ಆರು ರೌಡಿ ಶೀಟರ್ಗಳ ಬಂಧನ
ಬೆಂಗಳೂರು: ಗಡಿಪಾರು ಮಾಡುವಂತೆ ಸಂಬಂಧಪಟ್ಟ ಡಿಸಿಪಿಗಳು ಆದೇಶಿಸಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ನಗರದಲ್ಲಿ ವಾಸಿಸುತ್ತಿದ್ದ ಆರು ರೌಡಿ ಶೀಟರ್‌ಗಳನ್ನು ಸಿಸಿಬಿಯ ಸಂಘಟಿತ ಅಪರಾಧಗಳ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತರನ್ನು ಉಮೇಶ್ ಅಲಿಯಾಸ್ ಲೂಸು (ಬಸವೇಶ್ವರನಗರ ಠಾಣೆ), ಮಧು (ಗಂಗಮ್ಮಗುಡಿ ಠಾಣೆ), ಮುಹಮ್ಮದ್ ಆಜಂ (ವಿಲ್ಸನ್ ಗಾರ್ಡನ್ ಠಾಣೆ), ಮೋಹಿನ್ (ಡಿಜೆಹಳ್ಳಿ ಠಾಣೆ), ಶಿವಕುಮಾರ್ ಅಲಿಯಾಸ್ ಚುವ್ವಿ (ಸುದ್ದಗುಂಟೆಪಾಳ್ಯ ಠಾಣೆ) ಹಾಗೂ ಅಕ್ಷಯ್ (ಮಡಿವಾಳ ಠಾಣೆ) ಎಂದು ಗುರುತಿಸಲಾಗಿದೆ.
ಈ ಆರು ಮಂದಿಯನ್ನು ಸಂಬಂಧಪಟ್ಟ ಡಿಸಿಪಿಗಳು ಈಗಾಗಲೇ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಡಿಸಿಪಿಗಳ ಆದೇಶದಂತೆ ಅವರು ಬೆಂಗಳೂರು ನಗರದಲ್ಲಿ ವಾಸಿಸುವಂತಿರಲಿಲ್ಲ. ಆದರೂ ಪೊಲೀಸರ ಕಣ್ಣು ತಪ್ಪಿಸಿ ನಗರಕ್ಕೆ ವಾಪಸ್ ಆಗಿದ್ದ ಆರು ರೌಡಿ ಶೀಟರ್‌ಗಳು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಲು ಯತ್ನಿಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ಸಂಘಟಿತ ಅಪರಾಧಗಳ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಆರು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.