Bengaluru | ಪರೀಕ್ಷೆಯಲ್ಲಿ ಉತ್ತಮ ಅಂಕ ಕೊಡಿಸುವುದಾಗಿ ನಂಬಿಸಿ 22ಲಕ್ಷ ರೂ. ವಂಚನೆ
ಬೆಂಗಳೂರು : ಹಣ ಕೊಟ್ಟರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಕೊಡಿಸುವುದಾಗಿ ನಂಬಿಸಿದ್ದ ಸೈಬರ್ ವಂಚಕರು ನಗರದ ವ್ಯಕ್ತಿಯೊಬ್ಬರಿಂದ 22 ಲಕ್ಷ ರೂ.ಪಡೆದು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದ್ವಿತೀಯ ಪಿಯುಸಿ ಓದುತ್ತಿರುವ ಮಗಳ ತಂದೆಗೆ ಕರೆ ಮಾಡಿದ ವಂಚಕರು ತಾವು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯ ಹಿರಿಯ ಅಧಿಕಾರಿಗಳು ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದಾರೆ. ಮಗಳಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಮುಖ ವಿಷಯಗಳಲ್ಲಿ ಕಡಿಮೆ ಅಂಕ ಬರುವ ಸಾಧ್ಯತೆ ಇದೆ. ಹಣ ಕೊಟ್ಟರೆ ಉತ್ತರ ಪತ್ರಿಕೆ ಮೌಲ್ಯಮಾಪನ ಹಂತದಲ್ಲೇ ಅಂಕಗಳನ್ನು ತಿದ್ದಿ ಹೆಚ್ಚು ಅಂಕ ನೀಡುವುದಾಗಿ ನಂಬಿಸಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದರೆ ನೀಟ್ ಪರೀಕ್ಷೆ ಮೂಲಕ ಮೆಡಿಕಲ್ ಸೀಟು ಸುಲಭವಾಗಿ ಸಿಗುತ್ತದೆ ಎಂದು ಹೇಳಿದ ವಂಚಕರು ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 22 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾರೆ. ಆದರೆ, ಪರೀಕ್ಷೆ ಫಲಿತಾಂಶ ಬಂದ ನಂತರ ಅವರ ಮಗಳ ಅಂಕಗಳಲ್ಲಿ ಯಾವುದೇ ಬದಲಾವಣೆ ಆಗದಿರುವುದನ್ನು ಗಮನಿಸಿ ತಾವು ಮೋಸ ಹೋಗಿರುವುದನ್ನು ಅರಿತು ಸೈಬರ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ವಂಚನೆಗೊಳಗಾದ ವ್ಯಕ್ತಿಯು ನಗರದ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳು ಮತ್ತು ಫೋನ್ ಕರೆಗಳ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ.