ನಂದನ್
ಬೆಂಗಳೂರು: ನಗರದ ಹೆಬ್ಬಾಳದ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಮೃತನ ಪೋಷಕರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ಮೃತರನ್ನು ನಂದನ್ (25) ಎಂದು ಗುರುತಿಸಲಾಗಿದೆ. ಅವರು ಹೆಬ್ಬಾಳದ ಜಿಮ್‌ವೊಂದರಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಜಿಮ್‌ನ ವಾರ್ಷಿಕೋತ್ಸವ ಕಾರ್ಯಕ್ರಮ ಕಳೆದ ಶನಿವಾರ ನಡೆದಿದ್ದು, ಕಾರ್ಯಕ್ರಮ ತಡವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಳಗ್ಗೆ ಮನೆಗೆ ಬರುವುದಾಗಿ ಹೇಳಿ ನಂದನ್ ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಜಿಮ್‌ನಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಪರಿಚಿತರ ಅಪಾರ್ಟ್‌ಮೆಂಟ್‌ಗೆ ನಂದನ್ ತೆರಳಿದ್ದರು. ಅಲ್ಲಿ ಗಲಾಟೆ ನಡೆದಿದ್ದು, ಬಳಿಕ ಅಸ್ವಸ್ಥಗೊಂಡ ನಂದನ್ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂದನ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೊಲೆ ಆರೋಪ :
ವಿಷಯ ತಿಳಿದು ಆಸ್ಪತ್ರೆಗೆ ತೆರಳಿದ ನಂದನ್ ಅವರ ತಾಯಿ, ಮಗನ ಮೃತದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿ ಇದೊಂದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಟಿ ಮಾಡಲು ತೆರಳಿದ್ದ ವೇಳೆ ಗಲಾಟೆ ನಡೆದಿದ್ದು, ನಂದನ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ನಾಲ್ವರ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಶ್ವನಾಥ್, ವಿಜಯ್, ಶರತ್ ಹಾಗೂ ನಿಶಾಂತ್ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.