×
Ad

ಬೆಂಗಳೂರು | ಪೊಲೀಸ್ ಮಾಹಿತಿದಾರರ ಸೋಗಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ : ಮೂವರ ಬಂಧನ

Update: 2025-10-23 15:58 IST

ಬೆಂಗಳೂರು, ಅ.23: ಪೊಲೀಸ್ ಮಾಹಿತಿದಾರರ ಸೋಗಿನಲ್ಲಿ ಮಹಿಳೆಯೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ದರೋಡೆ ಮಾಡಿದ್ದ ಆರೋಪ ಪ್ರಕರಣ ಸಂಬಂಧ ಮೂವರನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

28 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಕಾರ್ತಿಕ್, ಗ್ಲೆನ್, ಸುಯೋಗ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಶಾಮೀಲಾಗಿರುವ ಮತ್ತಿಬ್ಬರಿಗಾಗಿ ಶೋಧ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಬೆಂಗಳೂರು ಗ್ರಾಮೀಣ ಎಸ್ಪಿ ಸಿ.ಕೆ.ಬಾಬಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಮಹಿಳೆ ಆರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಪತಿ ಹಾಗೂ ಇಬ್ಬರು ಮಕ್ಕಳ ಸಮೇತ ಗಂಗೊಂಡನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಜೀವನಕ್ಕಾಗಿ ಶಿವಾಜಿನಗರದ ಬ್ಯೂಟಿಪಾರ್ಲರ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಅ.21ರ ಸಂಜೆ 7 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಐವರು ಆರೋಪಿಗಳು ಸಂತ್ರಸ್ತೆ ಮನೆ ಕದ ತಟ್ಟಿದ್ದಾರೆ. ಬಳಿಕ ಸಂತ್ರಸ್ತೆಗೆ ತಾವು ಪೀಣ್ಯ ಠಾಣೆ ಪೊಲೀಸರ ಮಾಹಿತಿದಾರರು ಎಂದು ಪರಿಚಯಿಸಿಕೊಂಡಿದ್ದಾರೆ. ಈ ಮನೆಯಲ್ಲಿ ವೇಶ್ಯಾವಾಟಿಕೆ ಹಾಗೂ ಗಾಂಜಾ ದಂಧೆ ನಡೆಯುತ್ತಿದೆ. ಮನೆಯಲ್ಲಿರುವ ಗಾಂಜಾ ಜೊತೆಗೆ 1 ಲಕ್ಷ ಹಣ ಕೊಡಿ ಎಂದು ಒತ್ತಾಯಿಸಿದ್ದಾರೆ. ನಂತರ ಮನೆಯಲ್ಲಿದ್ದ 25 ಸಾವಿರ ನಗದು ಹಾಗೂ ಎರಡು ಮೊಬೈಲ್ ದೋಚಿದ್ದರು.

ಅಷ್ಟೇ ಮಾತ್ರವಲ್ಲದೆ, ಪಕ್ಕದಲ್ಲಿದ್ದ ಮತ್ತೊಂದು ಬಾಡಿಗೆ ಮನೆಗೆ ಬಲವಂತವಾಗಿ ಮಹಿಳೆಯನ್ನು ಕರೆದೊಯ್ದು ಸಾಮೂಹಿಕವಾಗಿ ಆತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಸಂತ್ರಸ್ತೆ ಪುತ್ರ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಮಹಿಳೆ ಹಾಗೂ ಹಲ್ಲೆಗೊಳಗಾಗಿದ್ದ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿ.ಕೆ.ಬಾಬಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News