ಬಲ್ಲಿದರ ಹಗೆವು ತೆಗೆಯುವುದು ಯಾವಾಗ?
ಸರಕಾರಕ್ಕೆ ನಿಜಕ್ಕೂ ತನ್ನ ಪ್ರಜೆಗಳ ಬಗೆಗೆ ಕಳಕಳಿ ಇದ್ದರೆ ವಿಳಂಬ ಮಾಡದೆ ಪರಿಹಾರೋಪಾಯಗಳನ್ನು ಜನಕ್ಕೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಮೀನ-ಮೇಷ ಎಣಿಸದೆ ಜನ-ಜಾನುವಾರುಗಳ ರಕ್ಷಣೆಗೆ ಬೇಕಾದ ಆಹಾರ, ನೀರು, ಆರೋಗ್ಯ ಸೌಕರ್ಯಗಳನ್ನು ನೇರವಾಗಿ ತಲುಪಿಸಬೇಕು. ಸಂಕೀರ್ಣವಾದ ತಾಂತ್ರಿಕತೆಗೆ ಈಡು ಮಾಡದೆ ನೇರವಾಗಿ ದುಡಿಯುವ ಜನರ ಕೈಗೆ ಲಭಿಸುವಂತೆ ನೋಡಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ನಾಯಿ ಕೊಡೆಗಳಂತೆ ಹುಟ್ಟಿ ಕೊಳ್ಳುವ ಮಧ್ಯವರ್ತಿಗಳ ಮೇಲೆ ನಿಗಾ ವಹಿಸಿ ಅಂಥವರಿಂದ ಜನರು ದೂರವಿರುವಂತೆ ಮಾಡಬೇಕು. ದಕ್ಷ, ಪ್ರಾಮಾಣಿಕ ಅಧಿಕಾರಿಗಳು, ನಿಜಕ್ಕೂ ಜನಪರವಾಗಿರುವ ಆಳುವವರು ಇದ್ದಲ್ಲಿ ಈ ಕೆಲಸ ಕಷ್ಟವೇನಲ್ಲ.
‘‘ಬಲ್ಲಿದರ ಹಗೆಯವ ತೆಗೆವನ್ನಬರ
ಬಡವರ ಹರಣ ಹಾರಿ ಹೋದ ತೆರನಂತಾಯಿತ್ತು.
ನೀ ಕಾಡಿ ಕಾಡಿ ನೋಡುವನ್ನಬರ ಎನಗಿದು ವಿಧಿಯೇ ಹೇಳಾ ತಂದೆ?
ಮುರುವಾರುವನ್ನಬರ, ಎಮ್ಮೆ ಗಾಳಿಗೆ
ಹಾರಿಹೋದ ತೆರನಂತಾಯಿತ್ತು.’’
ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ, ಚೆನ್ನಮಲ್ಲಿಕಾರ್ಜುನ’’
12ನೇ ಶತಮಾನದಲ್ಲಿ ಮಹಾದೇವಿಯಕ್ಕ ಬರೆದ ಈ ವಚನ ಪ್ರಸಕ್ತ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಅವಳು ಚೆನ್ನಮಲ್ಲಿಕಾರ್ಜುನನ ಕರುಣೆಗಾಗಿ ಹಂಬಲಿಸಿ ಇದನ್ನು ಪ್ರಸ್ತುತ ಪಡಿಸಿರಬಹುದಾದರೂ ಇಂದಿನ ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವಿನ ಸಂಬಂಧವನ್ನು ಇದು ಹೂಬಾಹೂಬ್ ಹಿಡಿದಿಡುತ್ತದೆ. ಆ ಕಾಲದ ಸಾಮಾಜಿಕ ಪರಿಸ್ಥಿತಿಗೆ ಅನ್ವಯಿಸಿ ಇವುಗಳನ್ನು ರಚಿಸಿದ್ದರೂ ಅವು ಈ ಕಾಲಕ್ಕೂ ಪ್ರಸ್ತುತವಾಗಿರುವುದು ಆಕಸ್ಮಿಕವೇನಲ್ಲ. ವಚನಗಳಿಗೆ ಸಾರ್ವಕಾಲಿಕತೆ ಪ್ರಾಪ್ತವಾಗಿದ್ದರೆ ಅದಕ್ಕೆ ಬಸವಾದಿ ಶಿವಶರಣರ ಸಕಲ ಜೀವಾತ್ಮರ ಲೇಸು ಬಯಸಿರುವ ಆಳದ ಕಾಳಜಿಯೇ ಕಾರಣ.
ಸಮಕಾಲೀನ ಸಂದರ್ಭಕ್ಕೆ ಈ ವಚನ ಹೇಳಿ ಮಾಡಿಸಿದಂತಿದೆ. ಪ್ರಸಕ್ತ ಸಾಲಿನಲ್ಲಿ ಕರ್ನಾಟಕದುದ್ದಕ್ಕೂ ಭಾಗಶಃ ಬರಗಾಲ ಕಾಣಿಸಿಕೊಂಡಿದೆ. ಕೆಲವೆಡೆ ಅತಿವೃಷ್ಟಿಯಾಗಿದ್ದರೆ, ಕೆಲವೆಡೆ ಅನಾವೃಷ್ಟಿಯು ಅಟ್ಟಾಡಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗ ಎಂದಿನಂತೆ ಅನಾವೃಷ್ಟಿಗೆ ತುತ್ತಾಗಿ ತತ್ತರಿಸುತ್ತಿದೆ. ವಾಡಿಕೆಗಿಂತ ಶೇ. 58 ಮಳೆ ಪ್ರಮಾಣ ಕಡಿಮೆಯಾಗಿದೆ. ಮುಂಗಾರು ಮಳೆ ಹೆಚ್ಚು ಕಡಿಮೆ ಕೈ ಕೊಟ್ಟಿದೆ. ದುರಂತವೆಂದರೆ ದಟ್ಟವಾದ ಮೋಡಗಳು ಆಕಾಶದ ತುಂಬ ಹರಡಿಕೊಂಡು ಇನ್ನಿಷ್ಟರಲ್ಲಿಯೇ ಮುಗಿಲು ಹರಿದು ಬೀಳುತ್ತದೆ ಎನ್ನುವಷ್ಟರಲ್ಲಿಯೇ ಬಿರುಗಾಳಿ ಬೀಸಿ ‘‘ನೆರೆದ ಸಂತೆ ಹರಿದು ಹೋಯ್ತು ಭರರರ’’ ಎನ್ನುವಂತೆ ಮೋಡಗಳು ಚದುರಿ ಹೋಗುತ್ತಿವೆ. ಒಂದೆರಡು ತುಂತುರು ಹನಿಯೊಡೆದು ಕಾದ ಭೂಮಿಯ ಧಗೆಯನ್ನು ಇನ್ನಷ್ಟು ಹೆಚ್ಚಿಸಿ ತಳಮಳ ಹುಟ್ಟಿಸುತ್ತಿದೆ. ರೈತರು ಬಿರಿ ಬೇಸಿಗೆಯನ್ನು ಬೆಳದಿಂಗಳು ಮಾಡಿಕೊಂಡು ಹೊಲವನ್ನು ಹರಗಿ, ನೇಗಿಲು ಹೊಡೆದು ಹದ ಮಾಡಿಟ್ಟುಕೊಂಡು ಕುಳಿತಿದ್ದಾರೆ. ಮಳೆ ನೋಡಿದರೆ ಮಕ್ಕಳಿಗೆ ಹುಣಸೆಹಣ್ಣಿನ ಆಸೆ ತೋರಿಸಿದಂತೆ ಬಾಯಲ್ಲಿ ನೀರೂರಿಸಿ ಮಾಯವಾಗುತ್ತಿದೆ. ಬಾಯಲ್ಲಿನ ನೀರು ಕುಡಿದೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಕುಡಿಯುವ ನೀರಿಗೂ ತತ್ವಾರವಾಗಿದೆ. ಬೋರ್‌ವೆಲ್‌ಗಳು ಒಣಗಿ ಹೋಗಿವೆ. ಕೆರೆ-ಹಳ್ಳಗಳು ನೀರಿನ ಹರಿವಿಲ್ಲದೆ ದುಶ್ಯಾಸನನ ಅಟ್ಟಹಾಸಕ್ಕೆ ಮೈದೆರೆದು ನಿಂತ ದ್ರೌಪದಿಯಂತೆ ಬೆದರಿ ನಿಂತಿವೆ. ಕುಡಿಯುವ ನೀರಿಗಾಗಿ ಜನರು ಸಾವಿರಗಟ್ಟಲೆ ಹಣ ಮೀಸಲಿಡಬೇಕಿದೆ. ಈಗಾಗಲೇ ಪರಿಸರವು ಸಂಪೂರ್ಣ ಕಲುಷಿತವಾಗಿದ್ದು ಎಲ್ಲಿಯೂ ನೇರವಾಗಿ ಹೊಳೆ-ಹಳ್ಳಗಳ ನೀರು ಕುಡಿಯುವಂತಿಲ್ಲ. ಎಲ್ಲರಿಗೂ ಫಿಲ್ಟರ್ ನೀರೇ ಆಗಬೇಕು. ನೇರವಾಗಿ ನೀರು ಕುಡಿದರೆ ವಾಂತಿ, ಭೇದಿ ಮತ್ತೇನೇನೋ ಬೇನೆಗಳು ತಪ್ಪಿದ್ದಲ್ಲ. ಹೀಗಾಗಿ ಕನಿಷ್ಠ ಬಡವರು ಕೂಡ ಹರಿಯುವ ನೀರು ಕುಡಿಯುವ ಧೈರ್ಯ ಮಾಡುತ್ತಿಲ್ಲ. ಜನಸಾಮಾನ್ಯರು ಹಾಲಿಗಾಗಿ ವ್ಯಯಿಸುವುದಕ್ಕಿಂತಲೂ ಹೆಚ್ಚಿನ ಹಣವನ್ನು ನೀರಿಗಾಗಿ ವ್ಯಯಿಸಬೇಕಿದೆ. ನೀರಿನ ಬರ ಕಾಣಿಸಿಕೊಂಡದ್ದೇ ಸಾಕು, ನೀರು ಶುದ್ಧೀಕರಣದ ದಂಧೆಗೆ ಸುಗ್ಗಿ ಬಂದಿದೆ. ಬರವು ಬಡವರಿಗೆ ಬರೆ ಎಳೆದರೆ ದಂಧೆಕೋರರ ಖಜಾನೆ ತುಂಬಿಸುತ್ತದೆ. ಅನ್ನದ ಅಭಾವಕ್ಕಿಂತ ನೀರಿನ ಅಭಾವ ದೈತ್ಯಾಕಾರವಾಗಿ ಬೆಳೆದು ನಿಂತಿದೆ.
ಇನ್ನೊಂದೆಡೆ ಗ್ರಾಮೀಣ ಭಾಗದಲ್ಲಿ ರೈತರು ನೆರೆದಿರುವ ಮೋಡಗಳು ಮತ್ತು ಆಗಾಗ ಒಸರುತ್ತಿರುವ ತುಂತುರು ಹನಿಗಳನ್ನು ನಂಬಿ ಕೆಲವೆಡೆ ಖಾರೀಫ್ ಬಿತ್ತನೆ ಮಾಡಿದ್ದಾರೆ. 90ರ ದಶಕದಿಂದಲೂ ಪ್ರಾರಂಭವಾದ ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದಿಂದಾಗಿ ರೈತರು ಪಾರಂಪರಿಕ ಬೀಜ ಸಂರಕ್ಷಣೆ ಪದ್ಧತಿಯನ್ನು ಕಳೆದುಕೊಂಡು ಖಾಸಗಿ ಕಂಪೆನಿಗಳ ಬೀಜಗಳ ಮೇಲೆಯೇ ಅವಲಂಬಿತರಾಗಿದ್ದಾರಷ್ಟೆ. ತಿಪ್ಪೆ ಗೊಬ್ಬರವು ಕಳೆದು ಹೋಗಿ ಜಮಾನಾ ಆಗಿದೆ. ಆಧುನಿಕ ಯಂತ್ರೋಪಕರಣಗಳಿಂದಾಗಿ ರೈತರ ಬಳಿ ಎತ್ತು, ಎಮ್ಮೆಗಳಿಲ್ಲ. ಗ್ಯಾಸ್‌ಒಲೆಗಳಿಂದಾಗಿ ಬೂದಿಯಿಲ್ಲ. ಸೆಗಣಿ, ಕುರುಳು, ಕಣಕಿ, (ಜೋಳದ ದಂಟು), ತಿಪ್ಪೆಗೆ ಆಕರವಾಗಿದ್ದ ಕಚ್ಚಾ ವಸ್ತುಗಳೆಲ್ಲ ಮಂಗಮಾಯವಾಗಿವೆ. ಈಗಿನ ತಿಪ್ಪೆ ಕೆದರಿದರೆ ಪ್ಲಾಸ್ಟಿಕ್ ವಸ್ತುಗಳು, ಭೂಮಿಯಲ್ಲಿ ಕರಗದ ತರಹೇವಾರಿ ಧಾತುಗಳು ಮಾತ್ರ ಸಿಗುತ್ತವೆ. ಹೀಗಾಗಿ ಕಂಪೆನಿಗಳು ತಯಾರಿಸುವ ಕೃತಕ ಗೊಬ್ಬರವೇ ಗತಿ. ಇದೆಲ್ಲವನ್ನು ರೈತರು ರೊಕ್ಕ ಕೊಟ್ಟು ಖರೀದಿಸಿಯೆ ತರಬೇಕು. ಇದ್ದಬಿದ್ದ ಹಣವನ್ನೆಲ್ಲ ಒಗ್ಗೂಡಿಸಿ ಬೀಜ, ಗೊಬ್ಬರ ಇತ್ಯಾದಿ ಪರಿಕರಗಳನ್ನು ತಂದು ಹೊಲಕ್ಕೆ ಸುರಿದಿದ್ದಾರೆ. ಮಳೆ ಮಾತ್ರ ಜಪ್ಪೆನ್ನುತ್ತಿಲ್ಲ. ಅದಕ್ಕೆ ಯಾರೋ ಬೆದರಿಸುತ್ತಿದ್ದಾರೇನೋ ಎಂಬಂತೆ ಮುಖ ತೋರಿಸುವಷ್ಟರಲ್ಲಿ ಓಡಿ ಹೋಗುತ್ತಿದೆ. ಹೆಸರು, ಉದ್ದು, ಎಳ್ಳು, ಕುಸಬಿ ಇತ್ಯಾದಿ ಖಾರೀಫ್ ಸಂಪೂರ್ಣ ಕೈ ಕೊಟ್ಟಿದೆ. ಹಾಕಿದ ರೊಕ್ಕ ಬರದೆ ರೈತರು ಕಂಗಾಲಾಗಿದ್ದಾರೆ.
ಇದನ್ನೆಲ್ಲ ತೆರೆದ ಕಣ್ಣಿನಿಂದ ನೋಡುತ್ತಿರುವ ಕರ್ನಾಟಕ ಸರಕಾರವು ಭಯಂಕರ ಬರಗಾಲ ಎದುರಾಗಿದೆ ಎಂಬ ಹೇಳಿಕೆಯನ್ನಿತ್ತು ಮೆಚ್ಚುಗೆ ಏನೋ ಗಳಿಸಿಕೊಂಡಿದೆ. ಬರಗಾಲ ಎಂದು ಘೋಷಿಸಿದರಷ್ಟೇ ಸಾಕೆ? ದುರಂತವೆಂದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ತಕ್ಷಣವೇ ಜಾರಿ ಮಾಡಬೇಕಾದ ಪರಿಹಾರವನ್ನು ಈವರೆಗೂ ನೀಡಿಲ್ಲ. ಕೇಂದ್ರ ಸರಕಾರವಂತೂ ಗ್ರಾಮೀಣ ಪ್ರದೇಶದ ವರವಾಗಿದ್ದ; ಅಲ್ಪ-ಸ್ವಲ್ಪವಾದರೂ ಒದಗಿ ಬರುತ್ತಿದ್ದ ‘ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ’ಯನ್ನು ಹೇಳ ಹೆಸರಿಲ್ಲದಂತೆ ಮಾಯ ಮಾಡಿದೆ. ಸದರಿ ಕಾಯ್ದೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುತ್ತೇವೆಂದು ನಂಬಿಸುತ್ತ ಅದರ ಹೆಸರು ಮತ್ತು ಸ್ವರೂಪ ಎರಡನ್ನೂ ಬದಲಿಸಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಮಾಡಿದೆ. ಬಡವರು, ರೈತರು ಮತ್ತು ಕೂಲಿಕಾರ್ಮಿಕರ ವಿರೋಧಿಯಾಗಿರುವ ಕೇಂದ್ರ ಸರಕಾರಕ್ಕೆ ಮನರೇಗಾ ಎಂಬ ಕಾಯ್ದೆಯೇ ಬೇಕಿರಲಿಲ್ಲ. ಅವರು ಅಧಿಕಾರದ ಚುಕ್ಕಾಣಿ ಹಿಡಿದ ದಿನದಿಂದಲೇ ಇದನ್ನು ಮಣ್ಣು ಮುಕ್ಕಿಸಲು ಯೋಜನೆ ರೂಪಿಸಿಕೊಂಡದ್ದನ್ನು ದೇಶದ ಜನರು ಗಮನಿಸುತ್ತಿದ್ದಾರೆ. ಸದರಿ ಕಾಯ್ದೆಯನ್ನು ನೆಲಕಚ್ಚಿಸಲು ಮಾಡಿರುವ ಒಂದೊಂದು ಕ್ರಮಗಳನ್ನು ಗಮನಿಸಿದರೆ ಈ ಮಾತು ಮನವರಿಕೆಯಾಗದಿರದು. ಮೊದಲನೆಯದಾಗಿ ಅವರು ವರ್ಷದಿಂದ ವರ್ಷಕ್ಕೆ ಇದಕ್ಕಾಗಿ ನೀಡುವ ಅನುದಾನದಲ್ಲಿ ಕಡಿತ ಮಾಡುತ್ತಾ ಬಂದರು. ಬರುತ್ತಿದ್ದ ಅನುದಾನವು ರಾಜ್ಯ ಸರಕಾರಕ್ಕೆ ಬಂದು ಅಲ್ಲಿಂದ ಕೂಲಿಕಾರ್ಮಿಕರ ಖಾತೆಗೆ ಜಮೆ ಆಗುವುದನ್ನು ತಪ್ಪಿಸಿ ನೇರವಾಗಿ ಕೇಂದ್ರ ಸರಕಾರದಿಂದ ಆಯಾ ಪಂಚಾಯತ್‌ಗೆ ಸಂದಾಯ ಮಾಡುವಂತೆ ಮಾಡಿದರು. ಕೂಲಿ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಎರಡು ಸಲ ಥಂಬ್ ನೀಡುವಂತೆ ವಿಧಿಸಿದರು. ಕೆಲಸ ಮಾಡುವ ಸ್ಥಳದಲ್ಲಿಯೇ ಜಿಪಿಎಸ್ ಮಾಡುವಂತೆ ಹೊಸ ನಿಯಮ ಹೇರಿದರು. ಇದುವರೆಗೂ ಕೆಲವು ಹಳ್ಳಿಗಳಲ್ಲಿ ಇಂಟರ್‌ನೆಟ್ ಸೌಲಭ್ಯವೇ ಬಂದಿಲ್ಲ. ಅನೇಕ ರೈತರ ಬೆರಳುಗಳ ಗೆರೆಗಳು ಕೆಲಸ ಮಾಡಿ ಸವೆದು ಹೋಗಿದ್ದು ಅವು ಅಚ್ಚಾಗುತ್ತಲೇ ಇಲ್ಲ... ಇಂಥ ನೂರೆಂಟು ಸಮಸ್ಯೆಗಳ ಸುಳಿಯಲ್ಲಿ ಕೃಷಿ ಕಾರ್ಮಿಕರು ಕೆಲಸವೇ ಬೇಡ ಎಂದು ಓಡಿ ಹೋಗುವಂತೆ ಮಾಡಿದರು. ವಿಕೇಂದ್ರೀಕರಣ ಮಂತ್ರ ಜಪಿಸುತ್ತಲೇ ಎಲ್ಲವನ್ನೂ ಕೇಂದ್ರ ಕೇಂದ್ರೀಕರಣಗೊಳಿಸಿದೆ. ಈಗ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ರಹದಾರಿ ಸಿಕ್ಕಂತಾಗಿದೆ. ಮನರೇಗಾ ಸಂಬಂಧಿತ ಏನೇ ಕೇಳಿದರೂ ಅವರು ಕೇಂದ್ರದ ದಿಲ್ಲಿ ಆಡಳಿತದೆಡೆ ಬೆಟ್ಟು ಮಾಡುತ್ತಾರೆ. ಹೋರಾಟದ ಎಲ್ಲ ಅಸ್ತ್ರಗಳನ್ನು ನಿಷ್ಫಲಗೊಳಿಸಲಾಗಿದೆ. ಕಗ್ಗಳ್ಳಿಗೂ ದಿಲ್ಲಿಗೂ ಎತ್ತಣಿಂದ ಸಂಬಂಧ. ರಾಜ್ಯ ಸರಕಾರ ತನ್ನ ಅಸಹಾಯಕತೆಯನ್ನು ವಿಜೃಂಭಿಸಿಕೊಳ್ಳುತ್ತಿದೆ. ಅಕ್ಷರಶಃ ಜನರು ಅನಾಥರಾಗಿದ್ದಾರೆ.
ಮುಂದುವರಿದು ಮಹಾತ್ಮಾ ಗಾಂಧಿಯ ಹೆಸರನ್ನು ಅಳಿಸಿ ವಿಬಿ-ಜಿ ರಾಮ್ ಜಿ ಅಂದರೆ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜಗಾರ್‌ಆಂಡ್ ಆಜೀವಿಕಾ ಮಿಷನ್’ ಎಂದು ಬದಲಿಸಿದ್ದಾರೆ. ಗಾಂಧಿಯ ಬಗೆಗೆ ಕೇಂದ್ರ ಸರಕಾರಕ್ಕೆ ಅಲರ್ಜಿ ಇರುವುದನ್ನು ದಿನಬೆಳಗಾದರೆ ಕಾಣುತ್ತಿದ್ದೇವಷ್ಟೆ. ಅದಕ್ಕಿಂತ ಭಯಾನಕವೆಂದರೆ ಈ ಮೊದಲು ಸದರಿ ಕಾಯ್ದೆಯ ಅನುಷ್ಠಾನಕ್ಕಾಗಿ ಕೇಂದ್ರವು ಶೇ. 90ರಷ್ಟು ಮತ್ತು ರಾಜ್ಯವು ಶೇ. 10 ಹಣವನ್ನು ಒದಗಿಸಬೇಕಿತ್ತು. ಪರಿವರ್ತಿತ ಕಾಯ್ದೆಯಲ್ಲಿ ಅನುಪಾತವನ್ನು ಶೇ. 60-40ಕ್ಕೆ ಇಳಿಸಲಾಗಿದೆ. ಕೇಂದ್ರದ ಈ ಧೋರಣೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳೇ ವಿರೋಧಿಸಿವೆ. ಕೇಂದ್ರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ರಾಜ್ಯ ಸರಕಾರವೂ ಕೂಡ ಸಚಿವ ಸಂಪುಟ ರಚನೆ, ಇಲಾಖೆಗಳಲ್ಲಿ ಆಫೀಸರ್‌ಗಳ ಬದಲಾವಣೆಗಳಲ್ಲಿಯೇ ಹುದುಗಿ ಹೋಗಿದೆ. ಬರಗಾಲ ಎದುರಾಗಿದೆ ಎಂಬ ಅದರ ಹೇಳಿಕೆಗೆ ನೈತಿಕತೆಯೇ ಉಳಿದಿಲ್ಲ. ಎಲ್ಲೆಡೆ ಇನ್ನೂ ಸಮೀಕ್ಷೆ ನಡೆಸುವಲ್ಲಿಯೇ ಕಾಲ ಹಾಕುತ್ತಿದೆ. ಹೋದ ಹೋದಲ್ಲಿ ಕಂಗೆಟ್ಟ ಜನರು ಮುಖ್ಯಮಂತ್ರಿಗಳಿಗೆ ಅಹವಾಲುಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಎಲ್ಲದಕ್ಕೂ ತೋರಿಕೆಯ ಉತ್ತರ ಕೊಡುತ್ತಿರುವ ಮಂತ್ರಿ ಮಹೋದಯರು ತಮ್ಮ ಮುಂದಿನ ಚುನಾವಣೆಯ ಲೆಕ್ಕಾಚಾರದಲ್ಲಿ ವ್ಯಸ್ತರಾಗಿದ್ದಾರೆ ವಿನಃ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವ ಕನಿಷ್ಠ ಸ್ಪಂದನ ಕಾಣುತ್ತಿಲ್ಲ. ತುಟಿ ಅನುಕಂಪದ ಕನಿಕರ, ತೋರಿಕೆಯ ಘೋಷಣೆ, ಅಬ್ಬರದ ಪ್ರಚಾರ ಬಿಟ್ಟರೆ ಕೆಲಸ ಮಾತ್ರ ಲೊಳಲೊಟ್ಟೆ ಎಂಬಂತಾಗಿದೆ. ಆಳುವವರ ಈ ಘಾತುಕತನವನ್ನು ಕಂಡು ಮಹಾದೇವಿಯಕ್ಕ ಈ ಮೇಲಿನ ವಚನ ರಚಿಸಿರುವಂತಿದೆ. ಬಲ್ಲಿದರು ಅಂದರೆ ಉಳ್ಳವರು, ಆಳುವವರು. ಇವರು ತಮ್ಮ ಹಗೆವು ಅರ್ಥಾತ್ ದವಸ-ಧಾನ್ಯಗಳನ್ನು ತುಂಬಿಡುತ್ತಿದ್ದ ಉಗ್ರಾಣಗಳು, ಕೂಲಿಕಾರರು ತಾವು ಮಾಡಿದ ಕೆಲಸದ ಕೂಲಿ ಕೇಳಲು ಬಂದರೆ ‘‘ನಮ್ ಹಗೆವು ಇನ್ನೂ ತೆಗೆದಿಲ್ಲ. ಹಗೆ ತೆಗೆದ ನಂತರ ಕೂಲಿ ಕೊಡುತ್ತೇವೆ’’ ಎನ್ನುತ್ತಿದ್ದಾರೆ. ಯಾಕೆ ತೆಗೆದಿಲ್ಲ ಎಂದರೆ ಇವತ್ತು ಮುಹೂರ್ತ ಸರಿ ಇಲ್ಲ. ನಾಳೆ ಘಾತವಾರ, ನಾಡಿದ್ದು ಅಮಾವಾಸ್ಯೆ, ಆಚಿನಾಡಿದ್ದು ಪರವೂರಿಗೆ ಹೋಗುತ್ತೇನೆ ಹೀಗೆ ದಿನಕ್ಕೊಂದು ನೆವನ ಹೇಳುತ್ತಲೇ ಇರುತ್ತಾರೆ. ಅಂತೂ ದುಡಿಯುವ ಜನರನ್ನು ಮೋಸ ಮಾಡಲು ನೂರು ತಂತ್ರಗಾರಿಕೆ ಹೆಣೆಯುತ್ತಾರೆ. ಇವರು ಹಗೆವು ತೆಗೆಯುವಷ್ಟರಲ್ಲಿ ಅನ್ನವಿಲ್ಲದೆ ಬಡಜನರು ಸಾವನ್ನಪ್ಪುವುದು ಗ್ಯಾರಂಟಿಯಾಗಿದೆ. ಇನ್ನೊಂದು ಅತ್ಯಂತ ಸೂಕ್ತವಾದ ಉಪಮೆಯೊಂದು ಅಕ್ಕ ಕೊಟ್ಟಿದ್ದಾಳೆ. ‘‘ಮುರುವಾರುವನ್ನಬರ ಎಮ್ಮೆ ಗಾಳಿಗೆ ಹಾರಿ ಹೋದ ತೆರನಂತಾಯಿತು’’ ಅಂದರೆ, ಸಾಮಾನ್ಯವಾಗಿ ಎಮ್ಮೆಗಳನ್ನು ಮನೆಯಲ್ಲಿ ಕಟ್ಟಿ ಹುಲ್ಲು ಮೇವು ಹಾಕಿ ಸಾಕುವುದಿಲ್ಲ. ಎಮ್ಮೆಯನ್ನು ಸೈರೆ ತಿರುಗಲು ಬಿಡಲಾಗುತ್ತದೆ. ಅದು ತಿಪ್ಪೆ, ತೆವರು ಮೇಯ್ದು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಗಬ್ಬಾದ (ಗರ್ಭಿಣಿ) ಎಮ್ಮೆಯನ್ನು ಈಯುವ (ಬೆಸಲೆಯಾಗುವ) ಹೊತ್ತಲ್ಲಿ ತಂದು ಮನೆಯಲ್ಲಿ ಕೂಡಿ ಹಾಕಲಾಗುತ್ತದೆ. ಎಮ್ಮೆ ಕರುವಿಗೆ ಜನ್ಮ ನೀಡುತ್ತದೆ. ಆ ಹೊತ್ತಲ್ಲಿ ಅದಕ್ಕೆ ಹೊರಗೆ ಹೋಗಿ ಮೇಯುವಷ್ಟು ತ್ರಾಣ ಇರುವುದಿಲ್ಲ. ಮನೆಯವರು ಬಾಣಂತಿ ಎಮ್ಮೆಗಾಗಿ ಎಲ್ಲ ದವಸ-ಧಾನ್ಯಗಳನ್ನು ಅದರೊಟ್ಟಿಗೆ ಉಪ್ಪು, ಹಿಟ್ಟು ಸೇರಿಸಿ ಚೆನ್ನಾಗಿ ಕುದಿಸಿ ಮುರುವು ಅಂದರೆ ಒಂದು ಬಗೆಯ ಕಿಚಡಿಯನ್ನು ಸಿದ್ಧಪಡಿಸಿ ಕೆಲವು ದಿನಗಳವರೆಗೆ ತಿನಿಸುತ್ತಾರೆ. ಮನುಷ್ಯರಾಗಲಿ, ದನಗಳಾಗಲಿ ಹಡೆದ ಹೊಟ್ಟೆ ನಾಜೂಕಾಗಿ ಇರುತ್ತದೆ. ಆಗ ಕಠಿಣ ಪದಾರ್ಥ ತಿನ್ನಲಾಗದು. ಆದ್ದರಿಂದ ಎಮ್ಮೆಯಾದಿ ಎಲ್ಲ ಹಯನು ಕರೆಯುವ ಪ್ರಾಣಿಗಳಿಗೆ ಮೃದುವಾದ ಆಹಾರ ನೀಡಿ ಪೋಷಿಸಲಾಗುತ್ತದೆ. ಅದರಲ್ಲಿಯೂ ಎಮ್ಮೆಯ ಹೊಟ್ಟೆ ದೊಡ್ಡದು. ಅದು ಕರೆಯುವ ಹಾಲಿನ ಪ್ರಮಾಣವು ದೊಡ್ಡದೇ. ಆದ್ದರಿಂದಲೇ ಬಾಣಂತಿ ಎಮ್ಮೆಗೆ ಬಿಸಿ ಬಿಸಿಯಾದ ಮುರುವು ತಿನ್ನಿಸುವುದು ವಾಡಿಕೆ. ಆದರೆ ಜಿಪುಣಾಗ್ರೇಸನಾಗಿದ್ದ ಒಡೆಯನೊಬ್ಬ ಬಾಣಂತಿ ಎಮ್ಮೆಗೆ ಮುರುವು ತಯಾರಿಸುವಲ್ಲಿಯೇ ಬೇಕಾದಷ್ಟು ವಿಳಂಬ ಮಾಡಿ, ಕೊತಕೊತ ಕುದಿಸಿ ಬಾಯಿ ಹಾಕಲು ಸಾಧ್ಯವಾಗದಂತೆ ಎಮ್ಮೆ ಮುಂದಿಟ್ಟು ಕೂತರೆ ಎಮ್ಮೆ ತಿನ್ನುವುದಾದರೂ ಹೇಗೆ? ಮುರುವು ಆರಿಸಲೆಂದು ಗಾಳಿ ಬೀಸುತ್ತ ಕುಳಿತು ದಿನ ಬೆಳಗಾದರೂ ಮುರುವು ಇನ್ನೂ ಆರಿಲ್ಲವೆಂದು ಹೇಳುತ್ತಲೇ ಕುಳಿತರೆ, ಆಹಾರಕ್ಕಾಗಿ ದಿನಗಟ್ಟಲೆ ಕಾದು ಸೋತು ಸೊರಗಿ ಹೋದ ಎಮ್ಮೆ ಗಾಳಿಗೆ ಹಾರಿ ಹೋಯಿತಂತೆ. ಮುರುವು ಆರಲಿಲ್ಲ. ಅಷ್ಟರಲ್ಲಿ ಗಾಳಿ ಬಿಟ್ಟ ರಭಸಕ್ಕೆ ಎಮ್ಮೆಯೇ ಹಾರಿ ಹೋದಂತೆ ಎಂದು ಅಕ್ಕ ಉಪಮಿಸಿದ್ದರಲ್ಲಿ ಅಕ್ಕನ ಲೋಕಜ್ಞಾನ ಎದ್ದು ಕಾಣಿಸುತ್ತದೆ. ಎಮ್ಮೆಯಂತೆ ಜನಗಳು ಕೂಡ ಸರಕಾರ ಪರಿಹಾರ ಕೊಡುತ್ತದೆ. ಇಂದಲ್ಲ, ನಾಳೆ ಏನಾದರೂ ದಕ್ಕೀತು ಎಂದು ಕಾದು ಕುಳಿತಿದ್ದಾರೆ. ಸರಕಾರದ ಮುರುವು ಆರುವುದೇ ಇಲ್ಲ. ಜನರಿಗೆ ಪರಿಹಾರ ದಕ್ಕುವುದೇ ಇಲ್ಲ. ಅಷ್ಟರಲ್ಲಿ ರೈತರ, ಕೃಷಿ ಕೂಲಿ ಕಾರ್ಮಿಕರ ಹರಣ ಹಾರಿ ಹೋಗುತ್ತದೆ. ಅರ್ಥಾತ್ ಅವರ ಕುಟುಂಬಗಳು ಆರ್ಥಿಕವಾಗಿ ದಿವಾಳಿಯಾಗುತ್ತವೆ. ಮಧ್ಯಮ ವರ್ಗದವರು ಬಡವರಾಗಿ, ಬಡವರು ಕಡುಬಡವರಾಗಿ, ಕಡುಬಡವರು ಸಮಾಜ ಘಾತುಕರಾಗಿ ತಳ್ಳಲ್ಪಡುತ್ತಾರೆ.
ಪರಿಹಾರ ಘೋಷಣೆಯಾದರೂ ಅದನ್ನು ಪಡೆದುಕೊಳ್ಳಲು ಬಡಪಾಯಿ ಜನರು ಕಚೇರಿಯಿಂದ ಕಚೇರಿಗಳಿಗೆ ಅಲೆದು ಮಧ್ಯವರ್ತಿಗಳ ಕೈಯಲ್ಲಿ ಸಿಕ್ಕು, ಅಧಿಕಾರಿಗಳಿಗೆ ಸಲಾಮು ಹೊಡೆದು ಸುಸ್ತಾಗಿ ಹೋಗುತ್ತಾರೆ. ಅವರಲ್ಲಿಯೂ ಮರಿ-ಕಿರಿ ಪುಢಾರಿಗಳು ಫಲವನ್ನುಂಡು ಕೊಬ್ಬುತ್ತಾರೆ. ಅರ್ಹ ಫಲಾನುಭವಿಗಳು ದೂರವೇ ಉಳಿಯುತ್ತಾರೆ. ಉಪಾಯವಿಲ್ಲದೆ ದುಡಿಯುವ ಜನರು ಮತ್ತೆ ಗುಳೆ ಹೋಗುತ್ತಾರೆ. ಅಲ್ಲಿಯೂ ಪಡಬಾರದ ಕಷ್ಟ ಪಡುತ್ತಾರೆ. ಎಲ್ಲವೂ ಅವರವರ ಹಣೆಬರಹ ಎಂದು ನಂಬಿಸುವ ಏಜೆನ್ಸಿಯೊಂದು ದೇವರು, ಧರ್ಮ, ಪಾಪ-ಪುಣ್ಯಗಳ ಹೆಸರಲ್ಲಿ ಸದಾ ಕಾವಲು ಕಾಯುತ್ತಲೇ ಇರುತ್ತದೆ. ಸರಕಾರದಲ್ಲಿರುವವರು ಮಾತ್ರ ತಾವು ಬಡಜನರ ಸೇವಕರು ಎಂದು ಪೋಸ್ ಕೊಡುತ್ತಲೇ ಅವರನ್ನು ಆಪೋಷನಗೈಯುತ್ತಲೇ ಇರುತ್ತಾರೆ. ಆದರೂ ನನ್ನ ದೇಶ ಮಹಾನ್ ಅಲ್ಲವೇ?
ಸರಕಾರಕ್ಕೆ ನಿಜಕ್ಕೂ ತನ್ನ ಪ್ರಜೆಗಳ ಬಗೆಗೆ ಕಳಕಳಿ ಇದ್ದರೆ ವಿಳಂಬ ಮಾಡದೆ ಪರಿಹಾರೋಪಾಯಗಳನ್ನು ಜನಕ್ಕೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಮೀನ-ಮೇಷ ಎಣಿಸದೆ ಜನ-ಜಾನುವಾರುಗಳ ರಕ್ಷಣೆಗೆ ಬೇಕಾದ ಆಹಾರ, ನೀರು, ಆರೋಗ್ಯ ಸೌಕರ್ಯಗಳನ್ನು ನೇರವಾಗಿ ತಲುಪಿಸಬೇಕು. ಸಂಕೀರ್ಣವಾದ ತಾಂತ್ರಿಕತೆಗೆ ಈಡು ಮಾಡದೆ ನೇರವಾಗಿ ದುಡಿಯುವ ಜನರ ಕೈಗೆ ಲಭಿಸುವಂತೆ ನೋಡಿಕೊಳ್ಳಬೇಕು. ಇಂಥ ಸಂದರ್ಭದಲ್ಲಿ ನಾಯಿ ಕೊಡೆಗಳಂತೆ ಹುಟ್ಟಿ ಕೊಳ್ಳುವ ಮಧ್ಯವರ್ತಿಗಳ ಮೇಲೆ ನಿಗಾ ವಹಿಸಿ ಅಂಥವರಿಂದ ಜನರು ದೂರವಿರುವಂತೆ ಮಾಡಬೇಕು. ದಕ್ಷ, ಪ್ರಾಮಾಣಿಕ ಅಧಿಕಾರಿಗಳು, ನಿಜಕ್ಕೂ ಜನಪರವಾಗಿರುವ ಆಳುವವರು ಇದ್ದಲ್ಲಿ ಈ ಕೆಲಸ ಕಷ್ಟವೇನಲ್ಲ. ಅಸಲಿಗೆ ಆಯ್ಕೆಯಾದ ಶಾಸಕರಿಗೆ ಜನತೆಯನ್ನು ನೈಸರ್ಗಿಕ ವಿಪತ್ತುಗಳಿಂದ ಪಾರು ಮಾಡಬೇಕೆಂಬ ನೈಜ ಕಾಳಜಿ ಇರಬೇಕು. ಬಲ್ಲಿದರೆಂಬ ಆಳುವವರು ತಮ್ಮ ಹೃದಯವೆಂಬ ಹಗೆವು ತೆಗೆದಾಗಲೇ ಜನ ಬದುಕಿ ಜನತಂತ್ರ ಫಲಕಾರಿಯಾಗುತ್ತದೆ. ಇಲ್ಲವಾದರೆ ವಿಪತ್ತು ನಿರ್ವಹಣಾ ಕಾಯ್ದೆ, ಆಹಾರ ಸುರಕ್ಷತಾ ಕಾನೂನುಗಳೆಲ್ಲವೂ ಕ್ಯಾಲೆಂಡರಿನ ಸಿಂಹವಾಗಿ ಸುಂದರ ಪೋಸು ಮಾತ್ರ ನೀಡುತ್ತವೆ.