×
Ad

Maharashtra: ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂ. ಸಾಗಿಸುತ್ತಿದ್ದ ಕಂಟೇನರ್ ದರೋಡೆ;‌ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆಯಾಗಿರುವ ಶಂಕೆ

►ದೇಶವನ್ನೇ ಬೆಚ್ಚಿಬೀಳಿಸಿದ ಅತಿದೊಡ್ಡ ದರೋಡೆ ಪ್ರಕರಣ ತಡವಾಗಿ ಬಹಿರಂಗ ► SIT ತನಿಖೆಗೆ ಸಿಎಂ ಫಡ್ನವೀಸ್ ಆದೇಶ

Update: 2026-01-25 12:32 IST

ಬೆಳಗಾವಿ: ದೇಶವನ್ನೇ ಬೆಚ್ಚಿಬೀಳಿಸುವಂತಹ 400 ಕೋಟಿ ರೂ. ಮೊತ್ತದ ಅತಿದೊಡ್ಡ ಕಂಟೇನರ್ ದರೋಡೆ ಪ್ರಕರಣ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2025ರ ಅಕ್ಟೋಬರ್ 16ರಂದು ಗೋವಾದಿಂದ ಕರ್ನಾಟಕ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಎರಡು ಕಂಟೇನರ್‌ಗಳನ್ನು ಅಪಹರಿಸಿ ಹಣ ದರೋಡೆ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಆದೇಶ ಹೊರಡಿಸಿದ್ದು, ಕರ್ನಾಟಕ–ಮಹಾರಾಷ್ಟ್ರ–ಗೋವಾ ರಾಜ್ಯಗಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬೆಳಗಾವಿ ಗಡಿಯಲ್ಲಿ ಕಂಟೇನರ್ ನಾಪತ್ತೆ

ಗೋವಾದಿಂದ ಕರ್ನಾಟಕ ಮಾರ್ಗವಾಗಿ ಸಾಗುತ್ತಿದ್ದ ಕಂಟೇನರ್‌ಗಳು ಬೆಳಗಾವಿ ಗಡಿಭಾಗ ತಲುಪಿದ ಬಳಿಕ ಏಕಾಏಕಿ ನಾಪತ್ತೆಯಾಗಿವೆ. ಈ ಸಂಬಂಧ ಚೋರ್ಲಾ ಘಾಟ್‌ನಲ್ಲಿ ಕಂಟೇನರ್ ಅಪಹರಿಸಿರುವ ಶಂಕೆ ವ್ಯಕ್ತವಾಗಿದ್ದು, ಮೂರು ರಾಜ್ಯಗಳ ಪೊಲೀಸರು ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದಲ್ಲಿಯೂ ಭಾರಿ ಸಂಚಲನ ಮೂಡಿಸಿದೆ.

ಅಪಹರಣ–ಚಿತ್ರಹಿಂಸೆ ಆರೋಪ

ಪ್ರಕರಣದ ದೂರುದಾರರಾದ ನಾಸಿಕ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಸಂದೀಪ್ ಪಾಟೀಲ್, ಕಂಟೇನರ್ ದರೋಡೆ ಬಳಿಕ ಅಪಹರಿಸಿ ಹಣಕ್ಕೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ. “400 ಕೋಟಿ ಹಣ ನೀನೇ ಲೂಟಿ ಮಾಡಿದ್ದೀಯಾ ಎಂದು ಗನ್ ಪಾಯಿಂಟ್‌ನಲ್ಲಿ ಹಲ್ಲೆ ನಡೆಸಿ, ಒಂದೂವರೆ ತಿಂಗಳು ಒತ್ತೆಯಾಳಾಗಿ ಇಟ್ಟಿದ್ದರು” ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿಗಳಾದ ವಿಶಾಲ್ ನಾಯ್ಡು, ಸುನೀಲ್ ದುಮಾಳ ಸೇರಿದಂತೆ ಹಲವರು ಹಣದ ಬಗ್ಗೆ ವಿಚಾರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ನಾಸಿಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಳೆಯ 2000 ರೂ. ನೋಟುಗಳಿರುವ ಶಂಕೆ

ಕಂಟೇನರ್‌ಗಳಲ್ಲಿ ಇದ್ದ ಹಣ 2000 ರೂ. ಮುಖಬೆಲೆಯ ಅಮಾನ್ಯೀಕರಣಗೊಂಡ ನೋಟುಗಳು ಎನ್ನಲಾಗಿದೆ. ದರೋಡೆ ಮಾಡಿದ ಆರೋಪಿಗಳು ಕಂಟೇನರ್ ತೋರಿಸಿ ವಿಡಿಯೋ ಕಾಲ್ ಮಾಡಿ, “400 ಕೋಟಿ ಬೇಕಾದರೆ ಚಲಾವಣೆಯಲ್ಲಿರುವ 100 ಕೋಟಿ ನೀಡಿ” ಎಂದು ಬೇಡಿಕೆ ಇಟ್ಟಿದ್ದಾರೆ ಎಂಬ ಅಂಶವೂ ತನಿಖೆಯಲ್ಲಿ ಹೊರಬಂದಿದೆ.

ಐವರ ಬಂಧನ, ಇಬ್ಬರು ಪರಾರಿ

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಎಸ್‌ಐಟಿ ಮುಖ್ಯಸ್ಥ ಆದಿತ್ಯ ಮೀರಖೇಲಕರ್, “ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಹುಡುಕಾಟ ಮುಂದುವರಿದಿದೆ. ಎಲ್ಲಾ ಆರೋಪಿಗಳನ್ನು ಬಂಧಿಸಿದ ಬಳಿಕವೇ ನಿಖರ ಮಾಹಿತಿ ನೀಡಲಾಗುವುದು” ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಕಿಶೋರ್ ಸಾಳ್ವೆ (ಶೇಠ್) ಹಾಗೂ ಅಜರ್ ಎಂಬವರು ನಾಪತ್ತೆಯಾಗಿದ್ದು, ಇವರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಪೊಲೀಸರು ಪರಸ್ಪರ ಮಾಹಿತಿ ಹಂಚಿಕೊಂಡಿದ್ದಾರೆ.

ಚುನಾವಣಾ ಹಣ ಬಳಕೆಯ ಶಂಕೆ

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಫಡ್ನವೀಸ್ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News