×
Ad

ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಗಮಿಸಿದ ಯೂರೋಪ್ ನಾಯಕರು

Update: 2026-01-25 11:09 IST

Photo Credit :  X/@MEAIndia

ಹೊಸದಿಲ್ಲಿ: ನಾಳೆ ದಿಲ್ಲಿಯಲ್ಲಿ ನಡೆಯಲಿರುವ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲು ಯೂರೋಪ್ ಮಂಡಳಿಯ ಆ್ಯಂಟೊನಿಯೊ ಕೋಸ್ಟಾ ಹಾಗೂ ಯೂರೋಪ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಇಂದು (ರವಿವಾರ) ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ. ಅವರನ್ನು ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜಿತಿನ್ ಪ್ರಸಾದ್ ಸ್ವಾಗತಿಸಿದರು.

ನಂತರ ಅವರು ಜನವರಿ 27ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆಯೋಜಿಸಲಾದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಡೊನಾಲ್ಡ್ ಟ್ರಂಪ್ ಸರ್ಕಾರದ ಆರ್ಥಿಕ ಮತ್ತು ಭದ್ರತಾ ನೀತಿಗಳಿಂದ ಹೆಚ್ಚುತ್ತಿರುವ ಜಾಗತಿಕ ಕಳವಳಗಳ ಕುರಿತು ಚರ್ಚೆ ನಡೆಸಲಿದ್ದಾರೆ.

ಜನವರಿ 24ರಂದು (ಶನಿವಾರ) ತಮ್ಮ ನಾಲ್ಕು ದಿನಗಳ ಭಾರತ ಭೇಟಿಗೆ ಚಾಲನೆ ನೀಡಿರುವ ಆ್ಯಂಟೊನಿಯೊ ಕೋಸ್ಟಾ ಮತ್ತು ಉರ್ಸುಲಾ ವಾನ್ ಡೆರ್ ಲೆಯೆನ್, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಯುವ ಶೃಂಗಸಭೆಯಲ್ಲಿ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದವನ್ನು ಪ್ರಕಟಿಸುವ ಸಾಧ್ಯತೆ ಇದೆ. ಇದರೊಂದಿಗೆ, ವ್ಯೂಹಾತ್ಮಕ ರಕ್ಷಣಾ ಪಾಲುದಾರಿಕೆ ಒಪ್ಪಂದ ಹಾಗೂ ಭಾರತೀಯ ವೃತ್ತಿಪರರ ವಲಸೆಯ ಕುರಿತ ಚೌಕಟ್ಟು ರೂಪಿಸುವ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್, “ಭಾರತ ಮತ್ತು ಯೂರೋಪ್ ನಡುವಿನ ಮುಂದಿನ ಹಂತದ ವ್ಯೂಹಾತ್ಮಕ ಪಾಲುದಾರಿಕೆಯ ರೂಪುರೇಷೆಯನ್ನು ರೂಪಿಸಲಾಗುತ್ತಿದೆ. ಭಾರತಕ್ಕೆ ಅಧಿಕೃತ ಭೇಟಿ ನೀಡಿರುವ ಯೂರೋಪ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರಿಗೆ ಹಾರ್ದಿಕ ಸ್ವಾಗತ” ಎಂದು ಬರೆದುಕೊಂಡಿದ್ದಾರೆ.

“ವಿಶ್ವದ ಎರಡು ಅತಿ ದೊಡ್ಡ ಪ್ರಜಾತಂತ್ರಗಳಾದ ಭಾರತ ಮತ್ತು ಯೂರೋಪ್ ಒಕ್ಕೂಟದ ಪಾಲುದಾರಿಕೆ ಪರಸ್ಪರ ವಿಶ್ವಾಸ ಮತ್ತು ಹಂಚಿಕೊಂಡ ಮೌಲ್ಯಗಳಲ್ಲಿ ಬೇರುಬಿಟ್ಟಿದೆ” ಎಂದೂ ಅವರು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಯೂರೋಪ್ ಒಕ್ಕೂಟದ ನಡುವಿನ ಒಪ್ಪಂದಗಳು ಏರುಗತಿಯಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News