ಕೇಂದ್ರದ ಸಲಹೆಯಂತೆ ನ್ಯಾಯಮೂರ್ತಿ ವರ್ಗಾವಣೆ: ಕೊಲಿಜಿಯಂ ವಿರುದ್ಧ ಸಿಡಿದೆದ್ದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭೂಯಾನ್ PC: x.com/thewire_in
ಹೊಸದಿಲ್ಲಿ: ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, “ಆಂತರಿಕ ವ್ಯವಸ್ಥೆ”ಯಿಂದಲೇ ಇದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭೂಯಾನ್, ಕೇಂದ್ರ ಸರ್ಕಾರದ ಸಲಹೆಯಂತೆ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿರುವ ಕ್ರಮವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಕೊಲಿಜಿಯಂ ವ್ಯವಸ್ಥೆಯ ಮೇಲೆ ಇದು “ಕಾರ್ಯಾಂಗದ ಒತ್ತಡಕ್ಕೆ ಬಹಿರಂಗ ನಿದರ್ಶನ”ವಾಗಿದ್ದು, “ದುರದೃಷ್ಟಕರ ಬೆಳವಣಿಗೆ” ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಮೂರ್ತಿ ಶ್ರೀಧರನ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೆ, ಸರ್ಕಾರಕ್ಕೆ ಅನಾನುಕೂಲವೆನಿಸುವ ಆದೇಶ ನೀಡಿದ ಕಾರಣಕ್ಕೆ ಒಬ್ಬ ನ್ಯಾಯಮೂರ್ತಿಯನ್ನು ಒಂದು ಹೈಕೋರ್ಟ್‌ನಿಂದ ಮತ್ತೊಂದು ಹೈಕೋರ್ಟ್‌ಗೆ ವರ್ಗಾಯಿಸುವ ಅಗತ್ಯವೇನಿದೆ ಎಂದು ನ್ಯಾಯಮೂರ್ತಿ ಭೂಯಾನ್ ಪ್ರಶ್ನಿಸಿದ್ದಾರೆ.
ನ್ಯಾಯಮೂರ್ತಿ ಶ್ರೀಧರನ್ ಅವರನ್ನು ಮಧ್ಯಪ್ರದೇಶ ಹೈಕೋರ್ಟ್‌ನಿಂದ ಛತ್ತೀಸ್‌ಗಢ ಹೈಕೋರ್ಟ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳೆದ ಆಗಸ್ಟ್‌ನಲ್ಲಿ ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರದ ಮನವಿಯ ಮೇರೆಗೆ ಕೊಲಿಜಿಯಂ ತನ್ನ ನಿರ್ಧಾರವನ್ನು ಬದಲಿಸಿ, ಅವರನ್ನು ಅಕ್ಟೋಬರ್‌ನಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿತು.
ನ್ಯಾಯಮೂರ್ತಿ ಶ್ರೀಧರನ್ ನೇತೃತ್ವದ ಮಧ್ಯಪ್ರದೇಶ ಹೈಕೋರ್ಟ್ ಪೀಠವು ಅಲ್ಲಿನ ಸರ್ಕಾರಕ್ಕೆ ಅನಾನುಕೂಲವಾಗುವ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ, ದಂಡನಾತ್ಮಕ ಕ್ರಮವಾಗಿ ಅವರನ್ನು ವರ್ಗಾಯಿಸಲಾಗಿದೆ ಎಂದು ಹಲವಾರು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದರು. ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಕೀಳುಹಾಸ್ಯದ ಭಾಷೆ ಬಳಸಿದ ಆರೋಪದ ಸಂಬಂಧ ಬಿಜೆಪಿ ಸಚಿವ ವಿಜಯ್ ಶಾ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.
“ನಿರ್ದಿಷ್ಟ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಮತ್ತೊಂದು ಹೈಕೋರ್ಟ್‌ಗೆ ವರ್ಗಾಯಿಸುವ ಸಂಬಂಧ ತಾನೇ ನೀಡಿದ್ದ ಶಿಫಾರಸ್ಸನ್ನು, ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಬದಲಾಯಿಸಿರುವುದು, ಕೊಲಿಜಿಯಂ ವ್ಯವಸ್ಥೆಯ ಸಮಗ್ರತೆಯ ವಿಷಯದಲ್ಲಿ ಮಾಡಿಕೊಂಡ ರಾಜಿಯಲ್ಲವೇ?” ಎಂದು ನ್ಯಾಯಮೂರ್ತಿ ಭೂಯಾನ್ ಕಟುವಾಗಿ ಪ್ರಶ್ನಿಸಿದ್ದಾರೆ.