ಬೆಳಗಾವಿ : ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ನ ನೌಕರರ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿ ಹಣದ ಬೇಡಿಕೆ ಇಟ್ಟಿದ್ದರೆನ್ನಲಾದ ವೈರಲ್ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ಉಪ ತಹಶೀಲ್ದಾರ್ ಅರುಣ ಶ್ರೀಖಂಡೆ ವಿರುದ್ಧ ನಿಪ್ಪಾಣಿ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಮಕಾತಿಯಲ್ಲಿ ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣದ ಬೇಡಿಕೆ ಇಟ್ಟಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ನ ನೌಕರರ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ನಿಯಮಾನುಸಾರ ಮತ್ತು ಪಾರದರ್ಶಕವಾಗಿ ನಡೆಯಲಿದೆ. ಅಧಿಕೃತವಾಗಿ ಅರ್ಜಿ ಆಹ್ವಾನಿಸಿ, ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಬರುವ ಮಧ್ಯವರ್ತಿಗಳು ಹಾಗೂ ಏಜೆಂಟರು ಉದ್ಯೋಗಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುವ ಜಾಲ ಹೊಂದಿದ್ದಾರೆ. ಆದ್ದರಿಂದ ಅಭ್ಯರ್ಥಿಗಳು ಯಾವುದೇ ಮಧ್ಯವರ್ತಿಗಳ ಮಾತನ್ನು ನಂಬಿ ಹಣ ನೀಡದೆ ಎಚ್ಚರಿಕೆ ವಹಿಸಬೇಕು ಎಂದು ಅಣ್ಣಾಸಾಹೇಬ ಜೊಲ್ಲೆ ಮನವಿ ಮಾಡಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor