ಬೆಳಗಾವಿ : ಪ್ರತಿ ಟನ್ ಕಬ್ಬಿಗೆ ವೈಜ್ಞಾನಿಕ ಹಾಗೂ ಲಾಭದಾಯಕ ಬೆಲೆ ನಿಗದಿಪಡಿಸಬೇಕು ಹಾಗೂ ಹೊಸದಿಲ್ಲಿಯಲ್ಲಿ ನಡೆದ ಸಭೆ ವಿಫಲಗೊಂಡ ಹಿನ್ನೆಲೆಯಲ್ಲಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲೆಯಾದ್ಯಂತ ಕಬ್ಬು ಬೆಳೆಗಾರರು ನಡೆಸಿದ ಪ್ರತಿಭಟನೆ ಮಂಗಳವಾರ ತೀವ್ರ ಸ್ವರೂಪ ಪಡೆದುಕೊಂಡಿತು.

ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಸ್ವಾಭಿಮಾನಿ ಶೇತ್ಕರಿ ಸಂಘಟನೆಗಳ ನೇತೃತ್ವದಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಿರೇಬಾಗೇವಾಡಿ ಹಾಗೂ ಹತ್ತರಗಿ ಟೋಲ್ ನಾಕಾ ಬಳಿ ರೈತರು ರಸ್ತೆ ತಡೆ ನಡೆಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೊಸದಿಲ್ಲಿಯಲ್ಲಿ ಕೇಂದ್ರ ಸರಕಾರದ ಪ್ರತಿನಿಧಿಗಳೊಂದಿಗೆ ನಡೆದ ಸಭೆ ಯಾವುದೇ ನಿರ್ಣಯವಿಲ್ಲದೆ ವಿಫಲಗೊಂಡ ಕಾರಣ, ರಾಜ್ಯಾದ್ಯಂತ ಹೆದ್ದಾರಿ ಬಂದ್‌ಗೆ ಕರೆ ನೀಡಲಾಗಿತ್ತು. ಅದರಂತೆ ಬೆಳಗಾವಿ ಜಿಲ್ಲೆಯ ಪ್ರಮುಖ ಟೋಲ್‌ಗಳ ಬಳಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ರೈತರು, ರೈತ ಮುಖಂಡ ಪ್ರೇಮಚಂದ ಚೌಗಲಾ, ಹಸಿರು ಸೇನೆ ಅಧ್ಯಕ್ಷ ಚೂನಪ್ಪಾ ಪೂಜಾರಿ ಹಾಗೂ ಮಾಜಿ ಸಂಸದ ರಾಜು ಶೆಟ್ಟಿ ಅವರ ನೇತೃತ್ವದಲ್ಲಿ ಧರಣಿ ಆಂದೋಲನ ಕೈಗೊಂಡರು.

ಕೇಂದ್ರ ಸರಕಾರ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು, ಸಂಪೂರ್ಣ ಎಥೆನಾಲ್ ಖರೀದಿಸಬೇಕು ಹಾಗೂ ಡಾ. ಸ್ವಾಮಿನಾಥನ್ ವರದಿಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೃಷಿಗೆ ಬಳಸುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳು ಮತ್ತು ಕೃಷಿ ಕಾರ್ಮಿಕರ ಕೂಲಿ ವೆಚ್ಚ ಕಳೆದ ಹತ್ತು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದರೂ, ಸಕ್ಕರೆ ಬೆಲೆ ಮಾತ್ರ ಹೆಚ್ಚಾಗದಿರುವುದು ರೈತರನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದೆ ಎಂದು ಮುಖಂಡರು ದೂರಿದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ರಾಜ್ಯ ಸರಕಾರದಿಂದ 5,500 ಹಾಗೂ ಕೇಂದ್ರ ಸರಕಕಾರದಿಂದ 1,000 ಸೇರಿ ಪ್ರತಿ ಟನ್ ಕಬ್ಬಿಗೆ ಒಟ್ಟು 6,600 ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳದಲ್ಲಿ ಬಿಸಿಲನ್ನು ಲೆಕ್ಕಿಸದೆ ರೈತರು ರಸ್ತೆ ಮೇಲೆ ಉರುಳಾಡಿ, ಬಾರುಕೋಲು ಹಾಗೂ ಪೊರಕೆ ಹಿಡಿದು ವಿನೂತನವಾಗಿ ಆಕ್ರೋಶ ಹೊರಹಾಕಿದರು. ಹೋರಾಟದ ಸ್ಥಳದಲ್ಲೇ ಮಧ್ಯಾಹ್ನ ಹೆದ್ದಾರಿ ಮೇಲೆ ಕುಳಿತು ಊಟ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ವಿವಿಧ ಮಠಾಧೀಶರು ಹಾಗೂ ಗಣ್ಯರು ಸ್ಥಳಕ್ಕೆ ಭೇಟಿ ನೀಡಿ ರೈತರ ಹೋರಾಟಕ್ಕೆ  ಬೆಂಬಲ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ತಾಲೂಕಿನ ಕೊಗನೊಳ್ಳಿ ಶುಲ್ಕ ವಸೂಲಾತಿ ಕೇಂದ್ರದ ಬಳಿಯೂ ಉಭಯ ರಾಜ್ಯಗಳ ರೈತರು ಪ್ರತಿಭಟನೆ ನಡೆಸಿದ ಕಾರಣ, ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

 ಡಿವೈಎಸ್ಪಿ ನೇತೃತ್ವದಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಕೈಬಿಡುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor