ಬೆಳಗಾವಿ : ಮನೆಗಳ್ಳತನ ಪ್ರಕರಣವನ್ನು ಭೇದಿಸಿರುವ ಬೆಳಗಾವಿ ಗ್ರಾಮೀಣ ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿ 26.53 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ರೋಹನ ರೂಪೇಶ ಪಾಟೀಲ (30) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪೀರನವಾಡಿ, ಹುಂಚ್ಯಾನಟ್ಟಿ ಹಾಗೂ ಮಚ್ಚೆ ಗ್ರಾಮಗಳಲ್ಲಿ ಹಗಲು ವೇಳೆಯಲ್ಲಿ ಸ್ಕೂಟಿಯಲ್ಲಿ ಸಂಚರಿಸಿ ಒಟ್ಟು ಆರು ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.2ರಂದು ಸ್ವಾಮಿ ವಿವೇಕಾನಂದ ನಗರ, ಹುಂಚ್ಯಾನಟ್ಟಿ ನಿವಾಸಿ ಲಕ್ಷ್ಮೀ ಸಿದ್ರಾಮ ರಾಮಣ್ಣವರ ಅವರು ತಮ್ಮ ಮನೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿಯಿಂದ 23,88,400 ರೂ. ಮೌಲ್ಯದ 161 ಗ್ರಾಂ ಚಿನ್ನಾಭರಣ, 2,30,000 ರೂ. ಮೌಲ್ಯದ ಒಂದು ಕೆ.ಜಿ. ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 35 ಸಾವಿರ ರೂ. ಮೌಲ್ಯದ ಸ್ಕೂಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಳ್ಳತನಕ್ಕೆ ಬಳಸಿದ್ದ ಕಬ್ಬಿಣದ ಉಳಿ, ಕಟರ್, ಸ್ಕ್ರೂಡ್ರೈವರ್ ಹಾಗೂ ಪಾನಾಗಳನ್ನೂ ಜಪ್ತಿ ಮಾಡಲಾಗಿದೆ.

ಪ್ರಕರಣವನ್ನು ಭೇದಿಸುವಲ್ಲಿ ಬೆಳಗಾವಿ ಗ್ರಾಮೀಣ ಠಾಣೆಯ ಪಿಐ ನಾಗನಗೌಡ ಕಟ್ಟಿಮನಿಗೌಡ್ರ, ಪಿಎಸ್‌ಐಗಳಾದ ಸಂತೋಷ ದಳವಾಯಿ, ಲಕ್ಷ್ಮ್ಮಪ್ಪ ಜೋಡಟ್ಟಿ, ವೈ.ಡಿ.ಸರನಾಯ್ಕ ಹಾಗೂ ಸಿಬ್ಬಂದಿ ಸತೀಶ ನಾಯಕವಾಡ, ಶ್ರೀಕಾಂತ ಉಪ್ಪಾರ, ಮಾರುತಿ ಕೋಟಬಾಗಿ, ಬಾಳೇಶ ಪಡನಾಡ, ಆನಂದ ಕೋಟಗಿ, ಶಿವಾನಂದ ವರ್ಚಗಲ್ಲ, ತಾಂತ್ರಿಕ ವಿಭಾಗದ ರಮೇಶ ಅಕ್ಕಿ, ಮಹಾದೇವ ಕಾಶಿದ ಹಾಗೂ ದೀಪಕ ದೊಡ್ಡಗೋಣಿ ಶ್ರಮಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor