ಬೆಳಗಾವಿ : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಭರ್ಜರಿ ಲಾಭ ಗಳಿಸಬಹುದು ಎಂಬ ಯೂಟ್ಯೂಬ್ ಜಾಹೀರಾತನ್ನು ನಂಬಿದ 60 ವರ್ಷದ ವ್ಯಕ್ತಿಯೊಬ್ಬರು 21,93,999 ರೂ. ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ವರದಿಯಾಗಿದೆ.

ಹಿಂದವಾಡಿ ನಿವಾಸಿ ಕಿಶೋರ ಎಂಬವರು ವಂಚನೆಗೊಳಗಾದವರು. ಜೂನ್ 20ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಪ್ರಸಾರವಾಗಿದ್ದ ಷೇರು ಹೂಡಿಕೆ ಕುರಿತ ಜಾಹೀರಾತನ್ನು ಅವರು ವೀಕ್ಷಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೂಲಕ ತಮ್ಮ ಹೆಸರು, ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡಿ ನೋಂದಣಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ನಂತರ ಸಂದೀಪ ಶರ್ಮಾ ಎಂಬಾತ ಕಿಶೋರ ಅವರಿಗೆ ಕರೆ ಮಾಡಿ, ಟೆಲಿಗ್ರಾಮ್ ಗುಂಪಿಗೆ ಸೇರಿಸಿದ್ದಾನೆ. ಬಳಿಕ ಪ್ರಿಯಾಂಶ ಶರ್ಮಾ ಎಂಬಾತ ಫೋನ್‌ಪೇ ಮೂಲಕ ಆರಂಭದಲ್ಲಿ 22 ಸಾವಿರ ರೂ. ವರ್ಗಾಯಿಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮೊತ್ತ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗಲಿದೆ ಎಂದು ನಂಬಿಸಿದ ಆರೋಪಿಗಳು, ವೆಬ್‌ಸೈಟ್ ಮೂಲಕ ಹಂತ ಹಂತವಾಗಿ ಕಿಶೋರ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಹೂಡಿಕೆ ಮಾಡಿದ ಹಣವಾಗಲಿ ಅಥವಾ ಭರವಸೆ ನೀಡಿದ್ದ ಲಾಭವಾಗಲಿ ಯಾವುದನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು ಕಿಶೋರ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಸಂಬಂಧ ಬೆಳಗಾವಿ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾ ಗಿದ್ದು, ಪೊಲೀಸರು ವಂಚನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor