×
Ad

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ | ಸರಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ : ಸಚಿವ ಸತೀಶ್ ಜಾರಕಿಹೊಳಿ

Update: 2026-07-12 22:23 IST

ಬೆಳಗಾವಿ: ಚಿಕ್ಕೋಡಿ ಭಾಗದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸಲು ಸರಕಾರ ಬದ್ಧವಾಗಿದೆ. ಮಳೆ ಕೊರತೆಯಿಂದ ಹಲವೆಡೆ ಬೆಳೆ ಹಾನಿಯಾಗಿರುವ ಕುರಿತು ದೂರುಗಳು ಬಂದಿದ್ದು, ಜಂಟಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಮೀಕ್ಷಾ ವರದಿ ಬಂದ ತಕ್ಷಣ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಕುರಿತು ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಚಿಕ್ಕೋಡಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿ ಮತ್ತು ಸಾರ್ವಜನಿಕರ ಹಿತರಕ್ಷಣೆಗೆ ಸರಕಾರ ಆದ್ಯತೆ ನೀಡುತ್ತಿದೆ. ಈ ಬಾರಿ ರಾಜ್ಯದ ಹಲವು ಭಾಗಗಳಂತೆ ಚಿಕ್ಕೋಡಿ ಭಾಗದಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಬೆಳಗಾವಿ ಜಿಲ್ಲಾ ವಿಭಜನೆ ಹಾಗೂ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲೆಗಳ ಪುನರ್‌ ರಚನೆ ಕುರಿತು ಸರಕಾರದ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಚಿಕ್ಕೋಡಿ ಜಿಲ್ಲೆ ರಚನೆ ಕುರಿತ ಬೇಡಿಕೆಯೂ ಪರಿಶೀಲನೆಯಲ್ಲಿದ್ದು, ಸೂಕ್ತ ಸಮಯದಲ್ಲಿ ಸರಕಾರ ನಿರ್ಧಾರ ಪ್ರಕಟಿಸಲಿದೆ ಎಂದು ಹೇಳಿದರು.

ಅಕ್ರಮ ವಲಸಿಗರಿಗೆ ಶಾಶ್ವತ ನಿವಾಸಿ ಪತ್ರ ನೀಡಲಾಗುತ್ತಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಯಮಾನುಸಾರ ಅರ್ಹರಿಗೆ ಮಾತ್ರ ಶಾಶ್ವತ ನಿವಾಸಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News