ಬೆಳಗಾವಿ : ಮದುವೆಯಾಗುವುದಾಗಿ ನಂಬಿಸಿ ನಾಲ್ಕು ವರ್ಷಗಳ ಕಾಲ ಪ್ರೀತಿಸಿದ ಯುವಕ, ಕೊನೆಗೆ ಮದುವೆಯಾಗುವಂತೆ ಒತ್ತಾಯಿಸಿದ ಪ್ರೇಯಸಿಯನ್ನೇ ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಯಬಾಗ ತಾಲೂಕಿನ ಹಾರುಗೇರಿ ಗ್ರಾಮದ ರಕ್ಷಿತಾ ಸಾರಿಕರ್ (25) ಕೊಲೆಯಾದ ಯುವತಿ. ಅಥಣಿ ತಾಲೂಕಿನ ಅಡಳಹಟ್ಟಿ ಗ್ರಾಮದ ಬಸಪ್ಪ ಸಿದ್ದಪ್ಪ ಸಾತನ್ನವಣ್ಣ ಕೊಲೆ ಆರೋಪಿಯಾಗಿದ್ದಾನೆ.

ಆರೋಪಿ ಬಸಪ್ಪ ಕಳೆದ ನಾಲ್ಕು ವರ್ಷಗಳಿಂದ ರಕ್ಷಿತಾಳನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ. ಆದರೆ, ಮದುವೆಯ ವಿಚಾರ ಬಂದಾಗಲೆಲ್ಲ ಮುಂದೂಡುತ್ತಾ ಬಂದಿದ್ದ. ಇದರಿಂದ ಅಸಮಾಧಾನಗೊಂಡಿದ್ದ ರಕ್ಷಿತಾಳನ್ನು ಅಕ್ಟೋಬರ್ 28ರಂದು ಹಾರುಗೇರಿಯಿಂದ ಗೋಕಾಕ್ ಫಾಲ್ಸ್‌ಗೆ ಕರೆದುಕೊಂಡು ಹೋಗಿದ್ದಾನೆ.

ಸಂಜೆ ಸುಮಾರು 4 ಗಂಟೆ ವೇಳೆಗೆ ಫಾಲ್ಸ್ ರಸ್ತೆಯ ಪಕ್ಕದ ಕಟ್ಟೆಯ ಮೇಲೆ ಇಬ್ಬರೂ ಕುಳಿತು ಮಾತನಾಡುತ್ತಿದ್ದಾಗ, ನಾಲ್ಕು ವರ್ಷಗಳಿಂದ ಮದುವೆಯಾಗುವುದಾಗಿ ಹೇಳಿ ಇದೀಗ ಮದುವೆಗೆ ಹಿಂದೇಟು ಹಾಕುತ್ತಿರುವುದೇಕೆ ಎಂದು ರಕ್ಷಿತಾ ಪ್ರಶ್ನಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಈ ವೇಳೆ ಕೋಪಗೊಂಡ ಬಸಪ್ಪ, ರಕ್ಷಿತಾಳ ಕೆನ್ನೆಗೆ ಬಲವಾಗಿ ಹೊಡೆದು, ಬಳಿಕ ಕೈಯಿಂದ ಕುತ್ತಿಗೆ ಹಿಸುಕಿ ವೇಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಕೊಲೆ ಮಾಡಿದ ಬಳಿಕ ಮೃತದೇಹವನ್ನು ಗೋಕಾಕ್ ಫಾಲ್ಸ್‌ನ ಗುಡ್ಡದ ಇಳಿಜಾರಿನಲ್ಲಿರುವ ಮುಳ್ಳಿನ ಪೊದೆಗಳ ಮಧ್ಯೆ ಎಸೆದು, ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor