ಉ.ಕ. ಅಭಿವೃದ್ಧಿಗೆ ಇಲ್ಲಿಯವರೆಗೆ 16,229 ಕೋಟಿ ಬಿಡುಗಡೆ : ಸಿದ್ದರಾಮಯ್ಯ
"ವಿವಿಧ ಯೋಜನೆಗಳಡಿಯಲ್ಲಿ 1,25,000 ಕೋಟಿ ರೂ. ಕೇಂದ್ರದಿಂದ ರಾಜ್ಯಕ್ಕೆ ಖೋತಾ"
ಬೆಳಗಾವಿ : ಉತ್ತರ ಕರ್ನಾಟಕದ ಬಗ್ಗೆ ಎರಡೂ ಸದನಗಳಲ್ಲಿ ಹೆಚ್ಚು ಸದಸ್ಯರು ಮಾತನಾಡಿದ್ದು, ಮೇಲ್ಮನೆಯಲ್ಲಿ ಬಿಜೆಪಿಯವರು 7 ಜನ ಹಾಗೂ ಕಾಂಗ್ರೆಸ್ ನ 5 ಜನ ಮಾತನಾಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಸೇರಿದಂತೆ ಒಟ್ಟು 5 ಗಂಟೆ 48 ನಿಮಿಷ ಚರ್ಚಿಸಿದ್ದಾರೆ. ಉತ್ತರ ಕರ್ನಾಟಕದ ಚರ್ಚೆ ಅಧಿವೇಶನದ ಎರಡನೇ ದಿನವೇ ಪ್ರಾರಂಭವಾಗಿದ್ದು ಇದೇ ಮೊದಲನೇ ಬಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.
ಶುಕ್ರವಾರ ವಿಧಾನ ಪರಿಷತ್ ಕಲಾಪದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪ್ರತಿಕ್ರಿಯಿಸಿದ ಅವರು, ವಿಧಾನ ಪರಿಷತ್ ನ ಹಿರಿಯ ಮನೆ ಎಂದು ಕರೆಯಲಾಗುತ್ತಿದ್ದು, ಇಲ್ಲಿನ ಸದಸ್ಯರ ಮಾತಿಗೆ ತೂಕವಿರುತ್ತದೆ. ಸದಸ್ಯರ ಸಲಹೆಗಳು ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾಗುತ್ತದೆ ಎಂದರು.
ರಾಜ್ಯದ ಸಮಗ್ರ ಅಭಿವೃದ್ಧಿಗೆ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಯಾಗಿ ಸಮಾನತೆ ಸಾಧಿಸಬೇಕು. ಪ್ರಾದೇಶಿಕ ಅಸಮಾನತೆ ನಿವಾರಿಸದಿದ್ದರೆ, ಜನರ ಕೂಗು ಇದ್ದೇ ಇರುತ್ತದೆ. ಉತ್ತರ ಕರ್ನಾಟಕದ ಬಗ್ಗೆ ಅಭಿವೃದ್ಧಿಯಾಗದೇ ಇರಲು ಹಲವು ಕಾರಣಗಳಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು ಹಾಲು ಯೂನಿಯನ್ ನಲ್ಲಿ ನೋಡಿದರೆ. ಒಂದು ದಿನಕ್ಕೆ 17 ಲಕ್ಷ ಲೀ. ಉತ್ಪಾದನೆಯಾಗುತ್ತಿದ್ದು, ಕಲಬುರಗಿ ಹಾಲು ಯೂನಿಯನ್ ನಲ್ಲಿ 67 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತದೆ. ಇದು ಪ್ರಾದೇಶಿಕ ಅಸಮಾನತೆಗೆ ಸ್ಪಷ್ಟ ಉದಾಹರಣೆಯಾಗಿದೆ. ಇದು ಜಿಲ್ಲಾವಾರು ತಲಾ ಆದಾಯದ ಮೇಲೂ ಪರಿಣಾಮ ಬೀರುತ್ತದೆ. ಕರ್ನಾಟಕ ರಾಜ್ಯದಲ್ಲಿ ಸರಾಸರಿ ತಲಾ ಆದಾಯ 3,39,813 ರೂ. ಇದೆ. ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿ ನಂ.1 ರಾಜ್ಯವಾಗಿದೆ. ಹೈನುಗಾರಿಕೆ ಚಟುವಟಿಕೆಗಳು , ಕೈಗಾರಿಕೆಗಳು ಜಾಸ್ತಿಯಾದರೆ, ಜನರ ವಲಸೆ ಕಡಿಮೆ, ಆರ್ಥಿಕತೆ ಸುಧಾರಿಸಿ, ತಲಾ ಆದಾಯವೂ ಜಾಸ್ತಿಯಾಗುತ್ತದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾಗಿದೆ. ಆದ್ದರಿಂದ ಕರ್ನಾಟಕ ತಲಾವಾರು ಆದಾಯದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಹೈದರಾಬಾದ್ ಕರ್ನಾಟಕವನ್ನು 371 ಜೆ ಗೆ ಸೇರಿಸಬೇಕೆಂದು ಬಹಳ ಹಿಂದಿನಿಂದಲೂ ಕೂಗಿತ್ತು. 1991ರಲ್ಲಿ ಎಚ್.ಕೆ.ಡಿ.ಬಿ ಪ್ರಾರಂಭವಾಯಿತು. ನಂತರ 2011 ಮತ್ತು 13ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಸೇರ್ಪಡೆಯಾಯಿತು. 371 ಜೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರಕಾರ. ಬಿಜೆಪಿಯ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಅದನ್ನು ತಿರಸ್ಕರಿಸಿದರು. ಎಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಶೇ.85ರಷ್ಟು ಹೈದರಾಬಾದ್ ಕರ್ನಾಟಕದಲ್ಲಿ ಮೀಸಲಾತಿ ನೀಡಬೇಕೆಂದು ಹಾಗೂ ರಾಜ್ಯದ ಇತರ ಭಾಗಗಳಲ್ಲಿನ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 8ರಷ್ಟು ಮಾಡಬೇಕೆಂದು ಮಾಡಿದ್ದ ಶಿಫಾರಸ್ಸನ್ನು ಯಥಾವತ್ತು ಜಾರಿಗೆ ತರಲಾಯಿತು ಎಂದು ಸಿದ್ದರಾಮಯ್ಯ ವಿವರಿಸಿದರು.
2013-14ರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುತ್ತಿದೆ. 2023ರಲ್ಲಿ 3000 ಕೋಟಿ, 2024/25 ರಲ್ಲಿ 3000 ಕೋಟಿ, 2025/2026 ರಲ್ಲಿ 5000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು ಅನುದಾನ ನೀಡಿರುವುದು 24,778 ಕೋಟಿಯಾದರೆ, ಬಿಡುಗಡೆಯಾಗಿರುವುದು 16,229 ಕೋಟಿ ರೂಪಾಯಿ, ಇಲ್ಲಿಯವರೆಗೆ ವೆಚ್ಚವಾಗಿರುವುದು14,890 ಕೋಟಿ ರೂಪಾಯಿಗಳು ಎಂದು ಸಿದ್ದರಾಮಯ್ಯ ಅಂಕಿಅಂಶ ಸಮೇತ ಉತ್ತರಿಸಿದರು.
2013 -14ರಿಂದ ಇಲ್ಲಿಯವರೆಗೆ ಬಿಜೆಪಿಯ ಕೇಂದ್ರ ಸರಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಬಿಜೆಪಿಯವರು ಉತ್ತರ ಕರ್ನಾಟಕ ಅಭಿವೃದ್ಧಿಯ ವಿರೋಧಿಗಳು. 15ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ವಿಶೇಷ ಅನುದಾನ ಸೇರಿದಂತೆ ಒಟ್ಟು 11,495 ಕೋಟಿ ರೂ.ಗಳನ್ನು ಕೊಡುವುದಾಗಿ ಕೇಂದ್ರ ಸರಕಾರ ಹೇಳಿದ್ದರೂ, ನಂತರ ಕೊಡಲಿಲ್ಲ. ಹಿಂದಿನ ಮೂರು ವರ್ಷದಿಂದ ಈ ಮೊತ್ತವನ್ನು ಕೇಂದ್ರ ಮಂಜೂರು ಮಾಡಲೇ ಇಲ್ಲ. ವಿವಿಧ ಯೋಜನೆಗಳಡಿಯಲ್ಲಿ 1,25,000 ಕೋಟಿ ರೂ.ಗಳು ಕೇಂದ್ರದಿಂದ ರಾಜ್ಯಕ್ಕೆ ಖೋತಾ ಆಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಿಂದ ತೆರಿಗೆ 4.50 ಲಕ್ಷ ಕೋಟಿ ಸಂಗ್ರಹಣೆಯಾದರೂ, ನಮಗೆ ನ್ಯಾಯಯುತ ಪಾಲು ದೊರೆಯುತ್ತಿಲ್ಲ. ಕೆಕೆಆರ್ ಡಿಬಿ ಗೆ ಅನುದಾನ ಕೊಡದೇ, ಮಹಾರಾಷ್ಟ್ರದ ವಿಧರ್ಭಕ್ಕೆ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ 173 ಟಿಎಂಸಿ ನೀರು ಬಳಸಿಕೊಳ್ಳಲು ಕೇಂದ್ರದಿಂದ ಇದುವರೆಗೆ ಅಧಿಸೂಚನೆ ಬಿಡುಗಡೆ ಮಾಡಿಲ್ಲ. ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಲು ಅನುಮತಿ ನೀಡಿಲ್ಲ. ಈ ಬಗ್ಗೆ ಅನೇಕ ಬಾರಿ ಕೇಂದ್ರವನ್ನು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಜಲಜೀವನ್ ಮಿಷನ್ ನಡಿ 13,500 ಸಾವಿರ ಕೋಟಿ ರೂ. ಕೇಂದ್ರ ಕೊಡದೇ, ರಾಜ್ಯದಲ್ಲಿ ಅಭಿವೃದ್ಧಿ ಸಾಧಿಸಲು ಹೇಗೆ ಸಾಧ್ಯ? ರಾಜ್ಯದ ಪಾಲಿನ 22,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳಸಾ ಬಂಡೂರಿ ಯೋಜನೆಗೆ ಸರ್ವ ಪಕ್ಷ ನಿಯೋಗ ಕೇಂದ್ರಕ್ಕೆ ಒಯ್ಯಲಾಗಿತ್ತು. ಆಗ ಪ್ರಧಾನಿ ಮೋದಿಯವರು ಸರಿಯಾದ ಪರಿಹಾರ ನೀಡಿರಲಿಲ್ಲ. 2018 ರಲ್ಲಿ ಯಡಿಯೂರಪ್ಪನವರು, ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಈ ಸಮಸ್ಯೆ ಬಗೆಹರಿಸುವುದಾಗಿ ಘೋಷಿಸಿದ್ದರು. ಆದರೆ, ಇದುವರೆಗೆ ಈ ಯೋಜನೆಗೆ ಹಸಿರು ನಿಶಾನೆ ದೊರೆತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೇಂದ್ರದಿಂದ ರಾಜ್ಯದ ರೈತರಿಗೆ ಅನ್ಯಾಯ:
ಕೇಂದ್ರ ಸರಕಾರ 1 ಕೆ.ಜಿ. ಸಕ್ಕರೆಗೆ ಎಂ.ಎಸ್. ಪಿ ನಿಗದಿ 31 ರೂ. 2019 ರಲ್ಲಿ ನಿಗದಿ ಮಾಡಿದೆ. ಆರು ವರ್ಷಗಳಲ್ಲಿ ಏನೂ ಬದಲಾವಣೆ ಮಾಡಿಲ್ಲ. 41 ರೂ.ಗಳಿಗೆ ಹೆಚ್ಚಿಸಲು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲಾಗಿದೆ. ಎಥನಾಲ್ ಹಂಚಿಕೆಯನ್ನು ಕೇಂದ್ರ ಸರಕಾರವೇ ಮಾಡುವುದು. ರಫ್ತು ನಿಗದಿ ಮಾಡುವುದು ಕೂಡ ಕೇಂದ್ರ ಸರಕಾರವೇ. ರೈತರಿಗೆ ಅನ್ಯಾಯ ಆಗಲು ಯಾರು ಕಾರಣ? ಎಫ್ ಆರ್ ಪಿ, ಎಂ ಎಸ್ ಪಿ, ಎಥನಾಲ್, ರಫ್ತು ಹೆಚ್ಚು ಮಾಡಲಿ. ಹೀಗಾದರೆ ಸ್ವಾಭಾವಿಕವಾಗಿ ಸಕ್ಕರೆ ಮತ್ತು ಕಬ್ಬಿನ ಬೆಲೆ ಹೆಚ್ಚಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕದಲ್ಲಿ 82 ಸಕ್ಕರೆ ಕಾರ್ಖಾನೆಗಳಿದ್ದು ಒಂದೇ ಒಂದು ಸರಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಇದೆ. 11 ಸಹಕಾರಿ ಕಾರ್ಖಾನೆಗಳಿವೆ. ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ.
2025/26 ರಲ್ಲಿ 7.40 ಲಕ್ಷ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದು, 600 ಲಕ್ಷ ಟನ್ ಕಬ್ಬು ಉತ್ಪಾದನೆ ಆಗಬಹುದೆಂದು ಅಂದಾಜಿಸಲಾಗಿದೆ. 2009 2010ರಿಂದ ಎಫ್ ಆರ್ ಪಿ ನಿಗದಿ ಮಾಡಲಾಗಿದೆ. ಇದನ್ನು ಕೇಂದ್ರ ಸರಕಾರ ನಿಗದಿಮಾಡುತ್ತದೆ. 9.50 ಯಿಂದ 10.28 ರೂ. ಎಫ್ ಆರ್ ಪಿ ನಿಗದಿ ಮಾಡಿದ್ದಾರೆ. 2022/23 ರಿಂದ 10.25 ರೂ. ಮಾಡಿದ್ದಾರೆ. ಈ ವರ್ಷ ಒಂದು ಟನ್ ಕಬ್ಬಿಗೆ 3,550 ರೂಪಾಯಿಗಳಿದ್ದು, ಹೆಚ್ ಅಂಡ್ ಟಿ ಕಳೆದರೆ ( 800 ರಿಂದ 900 ರೂ. ಗಳಿವೆ ) 2,700 ರೂಪಾಯಿ ನಿಗದಿಯಾಗುತ್ತದೆ. ಹೀಗಾಗಿ ರೈತರು ಹೋರಾಟ ಮಾಡಿದರು. ನಮ್ಮ ಸರಕಾರ ರೈತರೊಂದಿಗೆ ಸುದೀರ್ಘ ಸಭೆ ನಡೆಸಿ 10.25 ಇಳುವರಿ ಇದ್ದವರಿಗೆ 3300 ರೂಪಾಯಿ ಕೊಡಲು ತೀರ್ಮಾನಿಸಲಾಯಿತು. ಚಳುವಳಿಯನ್ನು ಹಿಂಪಡೆಯಲಾಯಿತು ಎಂದು ಸಿದ್ದರಾಮಯ್ಯ ವಿವರಿಸಿದರು.
ಉತ್ತರ ಕರ್ನಾಟಕದ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು:
ಉತ್ತರ ಕರ್ನಾಟಕದ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಪೌಷ್ಠಿಕತೆ ಸುಧಾರಿಸಲು ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. 10 ಸಾವಿರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದೆ, 31 ಸಾವಿರ ಇಂಜಿನಿಯರಿಂಗ್ ಪ್ರವೇಶ ದೊರೆತಿದೆ. 12 ಸಾವಿರ ಡೆಂಟಲ್ ಸೇರಿದಂತೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ದೊರೆತಿದೆ. 371 ಜೆ ಜಾರಿಯಿಂದ ಉತ್ತರ ಕರ್ನಾಟಕದ ಎಲ್ಲ ಆಯಾಮಗಳಲ್ಲಿಯೂ ಅಭಿವೃದ್ಧಿಯಾಗಿದೆ. ಉದ್ಯೋಗದಲ್ಲಿಯೂ ಒತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಕೇಂದ್ರದಿಂದ ರಾಜ್ಯಕ್ಕೆ ಅನುದಾನ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಸರಕಾರ ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ:
ಎರಡನೇ ಬಾರಿ ನಾನು ಮುಖ್ಯಮಂತ್ರಿಯಾಗಿದ್ದು, ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿಯವರು 9 ವರ್ಷದಲ್ಲಿ 5 ಜನ ಮುಖ್ಯಮಂತ್ರಿಗಳಾಗಿದ್ದರು. ಬಿಜೆಪಿಯ ಪ್ರಯತ್ನ ಹುಳಿಹಿಂಡುವ ಪ್ರಯತ್ನ ಸಫಲವಾಗುವುದಿಲ್ಲ. ನಮ್ಮ ಸರಕಾರ ಗಟ್ಟಿಯಾಗಿದ್ದು, ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ. ಇದು ಬಿಜೆಪಿಯ ಭ್ರಮೆ. ತನ್ನ ಪೂರ್ಣ ಅವಧಿಯನ್ನು ಮುಗಿಸಿ, ನಂತರ 2028ರಲ್ಲೂ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. 2008, 2018 ಅವಧಿಯಲ್ಲಿ ಬಿಜೆಪಿ ಜನಾರ್ಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ರಾಜ್ಯದ ಜನರು ಬಿಜೆಪಿಗೆ ಒಮ್ಮತ ತೋರಿಸಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.