BELAGAVI | ಹಲಗಾ ಗ್ರಾಮದ 'ಡಿಜಿಟಲ್ ಡಿಟಾಕ್ಸ್' ಅಭಿಯಾನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ
ಬೆಳಗಾವಿ: ಹಲಗಾ ಗ್ರಾಮದಲ್ಲಿ ಜಾರಿಗೆ ತಂದಿರುವ 'ಡಿಜಿಟಲ್ ಡಿಟಾಕ್ಸ್' ಅಭಿಯಾನಕ್ಕೆ ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಂಸೆ ವ್ಯಕ್ತಪಡಿಸಿ ಅಭಿನಂದನಾ ಪತ್ರ ಕಳುಹಿಸಿದ್ದಾರೆ.
ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಮತ್ತು ಟಿವಿ ಹಾವಳಿಯಿಂದ ಮಕ್ಕಳ ಶಿಕ್ಷಣ ಮತ್ತು ಕೌಟುಂಬಿಕ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳಗಾವಿಯ ಹಲಗಾ ಗ್ರಾಮವು ಕೈಗೊಂಡಿರುವ ನಿರ್ಧಾರ ಇಡೀ ದೇಶಕ್ಕೆ ಮಾದರಿ ಎಂದು ಸಚಿವೆ ಶ್ಲಾಘಿಸಿದ್ದಾರೆ.
ಪ್ರತಿದಿನ ಸಂಜೆ 7 ರಿಂದ ರಾತ್ರಿ 9 ಗಂಟೆಯ ವರೆಗೆ ಮೊಬೈಲ್ ಮತ್ತು ಟಿವಿ ಆಫ್ ಮಾಡಿ, ಕೇವಲ ಮಕ್ಕಳ ಓದು ಮತ್ತು ಮನೆಯವರೊಂದಿಗೆ ಸಮಯ ಕಳೆಯಲು ಮೀಸಲಿಟ್ಟಿರುವ ನಿಮ್ಮ 'ಡಿಜಿಟಲ್ ಡಿಟಾಕ್ಸ್' ಅಭಿಯಾನವು ಅತ್ಯಂತ ಪ್ರಶಂಸನೀಯ. ಗ್ರಾಮದಲ್ಲಿ ಸೈರನ್ ಮೊಳಗುತ್ತಿದ್ದಂತೆಯೇ ಎಲ್ಲರೂ ಒಮ್ಮತದಿಂದ ಈ ನಿಯಮ ಪಾಲಿಸುತ್ತಿರುವುದು ನಿಮ್ಮ ಶಿಸ್ತು ಮತ್ತು ಮುಂದಾಲೋಚನೆಗೆ ಸಾಕ್ಷಿಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ನೀವು ರೂಪಿಸಿದ ಈ ಯೋಜನೆ ಕೇವಲ ಒಂದು ನಿಯಮವಲ್ಲ, ಅದೊಂದು ಸಮಾಜಮುಖಿ ಕ್ರಾಂತಿ. ಈ ಕ್ರಾಂತಿಕಾರಿ ಹೆಜ್ಜೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಹಲಗಾ ಗ್ರಾಮದ ಈ ಮಾದರಿ ಕಾರ್ಯಕ್ರಮವು ಇತರ ಗ್ರಾಮಗಳಿಗೂ ಸ್ಫೂರ್ತಿಯಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಊರಿನ ಈ ಮಹತ್ವದ ಬದಲಾವಣೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಚಿವರು ತಿಳಿಸಿದ್ದಾರೆ.