ಪ್ರತಿಪಕ್ಷಗಳ ವಿರೋಧದ ಮಧ್ಯೆಯೂ ದ್ವೇಷ ಭಾಷಣ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರ
ಬೆಳಗಾವಿ : ಪ್ರತಿಪಕ್ಷಗಳ ಸದಸ್ಯರ ವಿರೋಧದ ನಡುವೆಯೂ ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕಾರವಾದ ರೂಪದಲ್ಲಿರುವ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ಮೇಲ್ಮನೆಯಲ್ಲಿ ಶುಕ್ರವಾರ ಅಂಗೀಕಾರ ದೊರೆಯಿತು.
ವಿಧಾನ ಪರಿಷತ್ ಸದನದಲ್ಲಿ ಶುಕ್ರವಾರ ದ್ವೇಷ ಭಾಷಣಕ್ಕೆ ಸಂಬಂಧಿಸಿದ ವಿಧೇಯಕವನ್ನು ಮಂಡಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಅನ್ವಯ ಈ ತಿದ್ದುಪಡಿ ವಿಧೇಯಕ ತರಲಾಗಿದೆ ಎಂದು ಸದನಕ್ಕೆ ವಿವರಿಸಿದರು.
ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷ ಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಧಾರ್ಮಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಸಂಘರ್ಷ ಸೃಷ್ಟಿಸುವ ಮಾತುಗಳು ಹೆಚ್ಚಾಗುತ್ತಿವೆ. ಪ್ರತಿನಿತ್ಯ ದ್ವೇಷ ಭಾಷಣದ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವರ್ಷ 59 ಪ್ರಚೋದನಾಕಾರಿ ಭಾಷಣ ಪ್ರಕರಣಗಳು ದಾಖಲಾಗಿವೆ. ಭಾಷಣ ಕೇಳಿ ಕೊಲೆ ಯತ್ನ ಮಾಡಿದ್ದಾರೆ. ಯುವಕರನ್ನು ಪ್ರಚೋದಿಸುವುದು ಹೆಚ್ಚಾಗಿದೆ" ಎಂದು ಜಿ.ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.
ಏನೋ ದೊಡ್ಡ ದ್ವೇಷ ಭಾಷಣ ಬಿಲ್ ತಂದಿದ್ದಾರೆ ಎಂಬ ಆತಂಕ ಬೇಡ. ಕಾನೂನು ಪಾಲಿಸುವವರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ವಿಧೇಯಕದ ಮುಖ್ಯ ಉದ್ದೇಶ ಸಾಮಾಜಿಕ ಸಾಮರಸ್ಯ ಕಾಪಾಡುವುದು ಮತ್ತು ದ್ವೇಷ ಭಾಷಣದಿಂದ ಉಂಟಾಗುವ ಸಂಘರ್ಷಗಳನ್ನು ತಡೆಗಟ್ಟುವುದು ಎಂದು ಜಿ.ಪರಮೇಶ್ವರ್ ಹೇಳಿದರು.
ಈ ವೇಳೆ ಸದಸ್ಯರಾದ ಸಿ.ಟಿ.ರವಿ, ಎನ್.ರವಿಕುಮಾರ್, ಭಾರತಿ ಶೆಟ್ಟಿ, ಕೇಶವ ಪ್ರಸಾದ್, ಶರವಣ, ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಹಲವರು ವಿಧೇಯಕವನ್ನು ವಿರೋಧಿಸಿದರು.
ಸುದೀರ್ಘ ಅವಧಿಯ ಚರ್ಚೆಯ ನಂತರ ಪ್ರಸ್ತಾವನ್ನು ಸಭಾಪತಿ ಹೊರಟ್ಟಿ ಅವರು ಧ್ವನಿಮತಕ್ಕೆ ಹಾಕಿದರು. ಸದಸ್ಯರ ಸಹಮತದೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.