ನ.8ರಂದು ಬಳ್ಳಾರಿಯಲ್ಲಿ ನದಾಫ್–ಪಿಂಜಾರ ಸಂಘದ 34ನೇ ರಾಜ್ಯ ಮಟ್ಟದ ಸಂಸ್ಥಾಪನಾ ದಿನಾಚರಣೆ
ಅಧ್ಯಯನ ಪೀಠ ಸ್ಥಾಪನೆಗೆ ಆಗ್ರಹ
ಬಳ್ಳಾರಿ: ಕರ್ನಾಟಕ ರಾಜ್ಯ ನದಾಫ್–ಪಿಂಜಾರ ಸಂಘದ 34ನೇ ರಾಜ್ಯ ಮಟ್ಟದ ಸಂಸ್ಥಾಪನಾ ದಿನಾಚರಣೆಯನ್ನು ನವೆಂಬರ್ 8ರಂದು ಬಳ್ಳಾರಿಯ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಘಟಕದ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಮುಖಂಡರು, ರಾಜ್ಯದಲ್ಲಿ ನದಾಫ್–ಪಿಂಜಾರ ಸಮುದಾಯವು 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಮುಸ್ಲಿಂ ಜನಸಂಖ್ಯೆಯಲ್ಲಿ ಸುಮಾರು ಶೇ.25ರಷ್ಟು ಪಾಲು ಹೊಂದಿದೆ. ರಾಜ್ಯ ಸರ್ಕಾರದ ಪ್ರವರ್ಗ-1 ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಸಮುದಾಯ ಸ್ಥಾನ ಪಡೆದಿದ್ದರೂ, ತಾಂತ್ರಿಕ ಸಮಸ್ಯೆಗಳು ಮತ್ತು ರಾಜಕೀಯ ಪ್ರೋತ್ಸಾಹದ ಕೊರತೆಯಿಂದ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಸಮುದಾಯವು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಇನ್ನೂ ಹಿಂದುಳಿದಿದೆ ಎಂದು ಹೇಳಿದರು.
ದಿವಂಗತ ಎಚ್. ಇಬ್ರಾಹಿಂ ಸಾಹೇಬರು ಸೇರಿದಂತೆ ಹಲವು ಮುಖಂಡರು ಸಮುದಾಯದ ಅಭಿವೃದ್ಧಿಯ ಉದ್ದೇಶದಿಂದ ಸಂಘವನ್ನು ಸ್ಥಾಪಿಸಿದ್ದಾರೆ. ಸಂಘವು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಆರ್ಥಿಕ ನೆರವು ನೀಡುತ್ತಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರ ಜತೆಗೆ, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸಹಿತ ಶಿಕ್ಷಣ ಒದಗಿಸುವ ಯೋಜನೆಗಳನ್ನು ರೂಪಿಸಿದೆ. ಸಂಘದ ನೆರವು ಪಡೆದ ವಿದ್ಯಾರ್ಥಿಗಳು ಶೇ.85ರಿಂದ 97ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ ಎಂದು ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ :
ಪ್ರತಿ ವರ್ಷ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು, ಉತ್ತಮ ಮಹಿಳಾ ಶಿಕ್ಷಕಿ ಹಾಗೂ ಪ್ರಗತಿಪರ ರೈತರನ್ನು ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಗಾದಿ ಉದ್ಯಮದಲ್ಲಿ ತೊಡಗಿರುವ ಹಿರಿಯ ಕಾರ್ಮಿಕರಿಗೆ ‘ಕಾಯಕಯೋಗಿ’ ಪ್ರಶಸ್ತಿ ಹಾಗೂ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗಾಗಿ ಶ್ರಮಿಸುತ್ತಿರುವ ಇತರ ಸಮುದಾಯಗಳ ಗಣ್ಯರಿಗೆ ಜಿಲ್ಲಾ ಮಟ್ಟದ ‘ಭಾವೈಕ್ಯ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಮುಖಂಡರು ವಿವರಿಸಿದರು.
ಅಭಿವೃದ್ಧಿ ನಿಗಮ, ಅಧ್ಯಯನ ಪೀಠ ಸ್ಥಾಪನೆಗೆ ಆಗ್ರಹ :
ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದ್ದು, ಧಾರವಾಡ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ ವರದಿ ಮುಂದಿನ ಕ್ರಮಕ್ಕಾಗಿ ಸರ್ಕಾರದ ಹಂತದಲ್ಲಿದೆ. ಗಾದಿ, ಹಗ್ಗ, ಕಣ್ಣಿ, ಮಿಣಿ ಸೇರಿದಂತೆ ವಿವಿಧ ಸಾಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿರುವ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕರೆಂದು ಗುರುತಿಸಲಾಗಿದ್ದು, ಕಾರ್ಮಿಕ ಕಾರ್ಡ್ ಪಡೆದು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಘೋಷಣೆಯಾಗಿರುವ ‘ನದಾಫ್–ಪಿಂಜಾರ ಹಾಗೂ ಇತರ 13 ಜಾತಿಗಳ ಅಭಿವೃದ್ಧಿ ನಿಗಮ’ವನ್ನು ಕಾರ್ಯಾರಂಭಗೊಳಿಸಬೇಕು. ‘ನದಾಫ್–ಪಿಂಜಾರ ಅಧ್ಯಯನ ಪೀಠ’ ಸ್ಥಾಪನೆಗೆ 2.50 ಕೋಟಿ ರೂ. ಕಾರ್ಪಸ್ ಫಂಡ್ ಅನುದಾನ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಈವರೆಗೆ ಬೇಡಿಕೆಗಳು ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುಲಶಾಸ್ತ್ರೀಯ ಅಧ್ಯಯನ ವರದಿಯ ಆಧಾರದ ಮೇಲೆ ಒಳಮೀಸಲಾತಿ ಕಲ್ಪಿಸುವುದು, ಪ್ರವರ್ಗ-1 ಪ್ರಮಾಣಪತ್ರ ಪಡೆಯುವಲ್ಲಿನ ತೊಂದರೆ ನಿವಾರಿಸುವುದು, ವೃತ್ತಿಪರ ತರಬೇತಿ ನೀಡುವುದು, ಉನ್ನತ ಶಿಕ್ಷಣ ಪ್ರವೇಶಕ್ಕೆ ಶುಲ್ಕ ರಿಯಾಯಿತಿ ಒದಗಿಸುವುದು ಹಾಗೂ ರಾಜಕೀಯ ಕ್ಷೇತ್ರದ ಉನ್ನತ ಹುದ್ದೆಗಳಲ್ಲಿ ಪ್ರಾತಿನಿಧ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ನವೆಂಬರ್ 8ರಂದು ನಡೆಯುವ ಸಂಸ್ಥಾಪನಾ ದಿನಾಚರಣೆಗೆ ರಾಜಕೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಿ, ಸಮುದಾಯದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಎಚ್. ಜಲೀಲ್ ಸಾಬ್, ಕಾರ್ಯದರ್ಶಿ ರಿಯಾಜ್ ಸಲೀಂ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಮೌಲಾಲಿ, ಕಾರ್ಯದರ್ಶಿ ಟಿ. ನೂರ್ ಬಾಷಾ, ಬಳ್ಳಾರಿ ವಿಭಾಗದ ಉಪಾಧ್ಯಕ್ಷ ಪಿ. ಶಾಸಬ್, ಕಾರ್ಯಕಾರಿ ಸದಸ್ಯರಾದ ದಾದಾ ಕಲಂದರ್, ಅಲ್ಲಾ ಬಕಾಶ್, ಮಸ್ತಾನ್ ವಲಿ, ಮಹಿಳಾ ಘಟಕದ ಪಿ. ಅಮೀನಾ ಬೀ, ಕಾರ್ಯದರ್ಶಿ ರಜಿಯಾ, ಬಳ್ಳಾರಿ ನಗರ ಅಧ್ಯಕ್ಷ ಜಿ.ಪಿ. ನಬಿ ಸಾಬ್, ನಗರ ಕಾರ್ಯದರ್ಶಿ ಅಲ್ಲಭಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.