ಸಂಡೂರು/ಬಳ್ಳಾರಿ: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿ ಹಂತದಿಂದಲೇ ಪರಿಸರ ಸಂರಕ್ಷಣೆಯ ಜಾಗೃತಿ ಬೆಳೆಸಿಕೊಳ್ಳಬೇಕು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ನಂದಿಹಳ್ಳಿಯ ನಿರ್ದೇಶಕ ಪ್ರೊ.ತಿಪ್ಪೇಸ್ವಾಮಿ ಎಚ್. ಹೇಳಿದರು.

ತಾಲೂಕಿನ ನಂದಿಹಳ್ಳಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಸಂಡೂರು ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ‘ಪಿಕ್ ಅಂಡ್ ಸ್ಪೀಚ್’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅರಣ್ಯ ನಾಶದಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುವುದರ ಜೊತೆಗೆ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವೂ ಹೆಚ್ಚಾಗುತ್ತದೆ. ಹೀಗಾಗಿ ಅರಣ್ಯ ಸಂರಕ್ಷಣೆ, ವನ್ಯಜೀವಿ ರಕ್ಷಣೆ ಹಾಗೂ ಪರಿಸರ ಜಾಗೃತಿಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸಂಡೂರು ದಕ್ಷಿಣ ವಲಯದ ವಲಯ ಅರಣ್ಯಾಧಿಕಾರಿ ಸೈಯದ್ ದಾದಾ ಖಲಂದರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯದಲ್ಲಿರುವ ವಿವಿಧ ವನ್ಯಜೀವಿಗಳ ಪರಿಸರ ಮಹತ್ವ, ಅವುಗಳ ಸಂರಕ್ಷಣೆ ಹಾಗೂ ಜೀವವೈವಿಧ್ಯ ಕಾಪಾಡುವ ಅಗತ್ಯತೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಬಳ್ಳಾರಿಯ ಡಾ. ಅಶೋಕ ಬಿ. (ಎಂ.ಬಿ.ಬಿ.ಎಸ್.) ಅವರು, ವನ್ಯಜೀವಿಗಳು ಮತ್ತು ಮಾನವ ಜೀವನದ ನಡುವಿನ ಅವಿನಾಭಾವ ಸಂಬಂಧವನ್ನು ವಿವರಿಸಿದರು. ಅರಣ್ಯಗಳು ಮನುಷ್ಯರಿಗೆ ಶುದ್ಧ ಗಾಳಿ, ಉತ್ತಮ ಪರಿಸರ ಹಾಗೂ ಸಮತೋಲಿತ ವಾತಾವರಣವನ್ನು ಒದಗಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಅರಿತು ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಉಪ ವಲಯ ಅರಣ್ಯಾಧಿಕಾರಿ ವೀರಾಂಜನೇಯ ವಿ. ಅವರು ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಉಪ ವಲಯ ಅರಣ್ಯಾಧಿಕಾರಿ ತಿಪ್ಪೇಸ್ವಾಮಿ ಆರ್. ಅವರು ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಸಂಯೋಜಕ ಡಾ. ಚೌಡಪ್ಪ ವಿ., ಸಮಾಜಕಾರ್ಯ ವಿಭಾಗದ ಸಂಯೋಜಕಿ ಡಾ. ಸುಮಾ ಕೆ.ಜಿ., ಸಂಡೂರು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ. ಮುಬಾರಕ್, ಖನಿಜ ಸಂಸ್ಕರಣ ವಿಭಾಗದ ಸಂಯೋಜಕ ಡಾ. ಶರತ್ ಕುಮಾರ್ ಎಸ್., ಅನ್ವಯಿಕ ಭೂವಿಜ್ಞಾನ ವಿಭಾಗದ ಸಂಯೋಜಕ ಡಾ. ಬಸವರಾಜ್ ಹಟ್ಟಿ ಸೇರಿದಂತೆ ವಿವಿಧ ವಿಭಾಗಗಳ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವನ್ಯಜೀವಿ ಸಪ್ತಾಹದ ಪ್ರಮುಖ ಆಕರ್ಷಣೆಯಾಗಿದ್ದ ‘ಪಿಕ್ ಅಂಡ್ ಸ್ಪೀಚ್’ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ವನ್ಯಜೀವಿ ಸಂರಕ್ಷಣೆ, ಅರಣ್ಯ ರಕ್ಷಣೆ ಹಾಗೂ ಪರಿಸರದ ಕುರಿತು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಉಪ ವಲಯ ಅರಣ್ಯಾಧಿಕಾರಿ ಹೊನ್ನೂರು ಸ್ವಾಮಿ ವಂದನಾರ್ಪಣೆ ನೆರವೇರಿಸಿದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಐಶ್ವರ್ಯ, ಬಜ್ಜಯ್ಯ, ದೀಪಕ್, ಲಕ್ಷ್ಮಣ್ ಚಂದ್ರನಾಯಕ್, ಚಿಕ್ಕಣ್ಣ ಹಾಗೂ ಆಸಿಫ್ ಸೇರಿದಂತೆ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor