ಕಂಪ್ಲಿ: ತಾಲ್ಲೂಕಿನ ಎರಡು ದಶಕಗಳ ಪ್ರಮುಖ ಬೇಡಿಕೆಗಳಾದ ದರೋಜಿ–ಗಂಗಾವತಿ ರೈಲ್ವೆ ಯೋಜನೆಗೆ ಅನುದಾನ ಬಿಡುಗಡೆ ಹಾಗೂ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕೆಂದು ಒತ್ತಾಯಿಸಿ, ಬಿಜೆಪಿ ಎಸ್‌ಸಿ ಮೋರ್ಚಾ ತಾಲೂಕು ಮಂಡಲ ಅಧ್ಯಕ್ಷ ಸಿ.ಎ. ಚನ್ನಪ್ಪ ಅವರ ನೇತೃತ್ವದಲ್ಲಿ ಬುಧವಾರ ಕಂಪ್ಲಿ ತಹಸೀಲ್ದಾರ್ ಮೂಲಕ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಸಿ.ಎ. ಚನ್ನಪ್ಪ, ಕಂಪ್ಲಿ ಮೂಲಕ ಹಾದುಹೋಗುವ 35 ಕಿ.ಮೀ. ಉದ್ದದ ದರೋಜಿ–ಗಂಗಾವತಿ ನೂತನ ಬ್ರಾಡ್‌ಗೇಜ್ ರೈಲ್ವೆ ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ರೈಲ್ವೆ ಮಂಡಳಿ ಈಗಾಗಲೇ ಪರಿಶೀಲಿಸಿದ್ದು, 705.45 ಕೋಟಿ ರೂ. ವೆಚ್ಚದ ಯೋಜನಾ ಮೊತ್ತವನ್ನು ನಿಗದಿಪಡಿಸಿದೆ ಎಂದು ತಿಳಿಸಿದರು.

ಈ ಯೋಜನೆಯಿಂದ ಹೊಸಪೇಟೆ, ಜಿಂದಾಲ್, ಬಳ್ಳಾರಿ, ಹೈದರಾಬಾದ್, ಕೊಪ್ಪಳ ಹಾಗೂ ಸಿಂಧನೂರು ಭಾಗದ ಪ್ರಯಾಣಿಕರಿಗೆ ಮತ್ತು ಸರಕು ಸಾಗಣೆಗೆ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ಸಚಿವ ಸಂಪುಟದಲ್ಲಿ ಯೋಜನೆಗೆ ಶೀಘ್ರ ಅನುಮೋದನೆ ನೀಡಿ, ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಕಂಪ್ಲಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹಳೆಯ ಸೇತುವೆಯ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಪ್ರಸ್ತುತ ಸೇತುವೆ ಆರು ದಶಕಗಳಷ್ಟು ಹಳೆಯದಾಗಿದ್ದು, ಸಂಪೂರ್ಣ ಶಿಥಿಲಗೊಂಡಿದೆ ಎಂದು ಹೇಳಿದರು. ನೂತನ ಸೇತುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎನ್ನಲಾಗಿದ್ದು, ಸರ್ಕಾರ ತಕ್ಷಣ ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಗಳಿ ಪಂಪಾಪತಿ, ರಾಜಶೇಖರ, ಸಿ.ಎಂ. ಬಸವರಾಜ, ಕೆ. ರಂಗಪ್ಪ, ರಾಜಶೇಖರ ಟಿ., ಡಿ. ರಮೇಶ್, ವಿ. ಲಿಂಗರಾಜ್ ಯಾದವ್, ವೈ. ಮುರಳಿ ಮೋಹನ್ ರೆಡ್ಡಿ, ಬಿ. ನಾಗರಾಜ, ಆಕಾಶ್, ಎಂ. ವಿರುಪಾಕ್ಷಿ, ಬಿ. ಮಂಜುನಾಥ ಬಾರಿಕಾರ್ ಹಾಗೂ ನಾಗರಾಜ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor