Ballari | ಅ.20ರವರೆಗೆ ಎಚ್ಎಲ್ಸಿ ಕಾಲುವೆಗೆ ನೀರು: ಶಾಸಕ ಜೆ.ಎನ್.ಗಣೇಶ್ ಭರವಸೆ
ಬಳ್ಳಾರಿ/ಕಂಪ್ಲಿ: ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವ ನಿಟ್ಟಿನಲ್ಲಿ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಅಕ್ಟೋಬರ್ 20ರವರೆಗೆ ಎಚ್ಎಲ್ಸಿ (HLC) ಕಾಲುವೆಗೆ ನೀರು ಹರಿಸಲಾಗುವುದು. ಆದ್ದರಿಂದ ರೈತರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಜೆ.ಎನ್. ಗಣೇಶ್ ಭರವಸೆ ನೀಡಿದ್ದಾರೆ.
ಎಚ್ಎಲ್ಸಿ ಕಾಲುವೆ ವ್ಯಾಪ್ತಿಗೆ ನೀರು ಕಡಿತಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಅವರು, “ರೈತರು ಇಂತಹ ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೊಳಗಾಗಬಾರದು. ರೈತರ ಪರವಾಗಿ ಶಕ್ತಿಮೀರಿ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ” ಎಂದರು.
ಮೆಣಸಿನಕಾಯಿ ಬೆಳೆಯನ್ನು ಉಳಿಸಿಕೊಳ್ಳಲು ಡಿಸೆಂಬರ್ 15ರವರೆಗೆ ನೀರು ಹರಿಸುವಂತೆ ರೈತರು ಮನವಿ ಮಾಡಿದ್ದಾರೆ. ಜಲಾಶಯದಲ್ಲಿ ನೀರಿನ ಲಭ್ಯತೆ ಇರುವವರೆಗೆ ರೈತರಿಗೆ ನೀರು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಅಕ್ಟೋಬರ್ 20ರ ನಂತರ ಉನ್ನತ ಮಟ್ಟದ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ನೀರು ಹರಿಸುವ ಕುರಿತು ಸಮಗ್ರ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಜೆ.ಎನ್. ಗಣೇಶ್ ಸ್ಪಷ್ಟಪಡಿಸಿದರು. ರೈತರು ಸಹಕರಿಸಿದರೆ ಪ್ರತಿ ಹಂತದಲ್ಲೂ ಅವರೊಂದಿಗೆ ನಿಂತು ಸಮರ್ಪಕವಾಗಿ ನೀರು ಹರಿಸಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.