Ballari | ಗುರು ಪೂರ್ಣಿಮೆ ಅಂಗವಾಗಿ ಸಂಡೂರಿನ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ

Update: 2026-07-29 20:24 IST

ಸಂಡೂರು, ಜು. 29: ಗುರು ಪೂರ್ಣಿಮೆಯ ಅಂಗವಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಶ್ರೀ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭವ್ಯ ಅಲಂಕಾರ, ಅನ್ನಸಂತರ್ಪಣೆ ಹಾಗೂ ಭಕ್ತರಿಗೆ ವಿಶೇಷ ದರ್ಶನದ ವ್ಯವಸ್ಥೆಯನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು. ಕಳೆದ 13 ವರ್ಷಗಳಿಂದ ಬಿಕೆಜಿ ಗಣಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜಸೇವಕ ಷಣ್ಮುಖ ಶೆಟ್ಟರು ಈ ಧಾರ್ಮಿಕ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಈ ವರ್ಷವೂ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಅತ್ಯುನ್ನತ ಸ್ಥಾನವಿದ್ದು, “ವರ್ಣಮಾತ್ರಂ ಕಲಿಸಿದಾತಂ ಗುರು” ಎಂಬ ನುಡಿಯಂತೆ ಗುರುಗಳ ಗೌರವಾರ್ಥವಾಗಿ ಗುರು ಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಶ್ರೀ ಸಾಯಿಬಾಬಾ ದೇವಸ್ಥಾನವನ್ನು ವಿವಿಧ ಬಗೆಯ ಹೂವುಗಳು, ದೀಪಾಲಂಕಾರ ಹಾಗೂ ಆಕರ್ಷಕ ವಿನ್ಯಾಸಗಳಿಂದ ಅಲಂಕರಿಸಲಾಗಿತ್ತು.

ಬೆಳಗ್ಗೆಯಿಂದಲೇ ವಿಶೇಷ ಅಭಿಷೇಕ, ಪೂಜೆ, ಆರತಿ ಹಾಗೂ ಭಜನಾ ಕಾರ್ಯಕ್ರಮಗಳು ನಡೆದವು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ಸಾಯಿಬಾಬರ ದರ್ಶನ ಪಡೆದು ಆಶೀರ್ವಾದ ಪಡೆದರು. ಭಕ್ತರಿಗೆ ಸುಗಮ ದರ್ಶನ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.

ಗುರು ಪೂರ್ಣಿಮೆಯ ಪ್ರಯುಕ್ತ ಭಕ್ತರಿಗೆ ಸಾಂಪ್ರದಾಯಿಕ ಅನ್ನಸಂತರ್ಪಣೆಯನ್ನೂ ಏರ್ಪಡಿಸಲಾಗಿದ್ದು, ನೂರಾರು ಭಕ್ತರು ಪ್ರಸಾದ ಸ್ವೀಕರಿಸಿದರು. ಯಾವುದೇ ಪ್ರಚಾರದ ಹಂಬಲವಿಲ್ಲದೆ ಕಳೆದ 13 ವರ್ಷಗಳಿಂದ ಷಣ್ಮುಖ ಶೆಟ್ಟರು ಸೇವಾಭಾವದಿಂದ ಈ ಧಾರ್ಮಿಕ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಥಳೀಯ ಭಕ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಮಾತನಾಡಿ, ಪ್ರತಿವರ್ಷ ಗುರು ಪೂರ್ಣಿಮೆಯಂದು ವಿಶೇಷ ಪೂಜೆ, ದೇವಸ್ಥಾನದ ಅಲಂಕಾರ, ವ್ಯವಸ್ಥಿತ ದರ್ಶನ ಹಾಗೂ ಅನ್ನಸಂತರ್ಪಣೆಯಂತಹ ಸೇವೆಗಳನ್ನು ಷಣ್ಮುಖ ಶೆಟ್ಟರು ತಮ್ಮ ವೈಯಕ್ತಿಕ ಆಸಕ್ತಿ ಮತ್ತು ಭಕ್ತಿಯಿಂದ ನೆರವೇರಿಸುತ್ತಿದ್ದು, ಅವರ ಸೇವಾ ಮನೋಭಾವ ಇತರರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಅರ್ಚಕರು, ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಗುರು ಪರಂಪರೆಗೆ ಗೌರವ ಸಲ್ಲಿಸಿದರು. ಗುರುಗಳ ಆಶೀರ್ವಾದ ಹಾಗೂ ಶ್ರೀ ಸಾಯಿಬಾಬರ ಕೃಪೆಯಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸೇವಾ ಮನೋಭಾವ ಮತ್ತಷ್ಟು ವೃದ್ಧಿಯಾಗಲಿ ಎಂದು ಪ್ರಾರ್ಥಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News