Ballari | ನಿಡುಗುರ್ತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹಿಮೋಗ್ಲೋಬಿನ್ ಪರೀಕ್ಷೆ ಸೇರಿ ಸಮಗ್ರ ಆರೋಗ್ಯ ತಪಾಸಣೆ

Update: 2026-07-27 16:53 IST

ಸಂಡೂರು/ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ನಿಡುಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಸೋಮವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯ ಎ. ಯರ್ರಿಸ್ವಾಮಿ ಅವರ ನೇತೃತ್ವದಲ್ಲಿ ಹಾಗೂ ಸಹ ಶಿಕ್ಷಕರ ಸಹಕಾರದೊಂದಿಗೆ ನಡೆದ ಶಿಬಿರದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಲಾಯಿತು. ಜೊತೆಗೆ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಿ, ರಕ್ತಹೀನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಪರಿಶೀಲನೆ ಮಾಡಲಾಯಿತು.

ಶಿಬಿರದಲ್ಲಿ ವೈದ್ಯೆ ಡಾ. ಸಹನಾ ಅವರು ವಿದ್ಯಾರ್ಥಿಗಳ ಆರೋಗ್ಯವನ್ನು ಸಮಗ್ರವಾಗಿ ಪರೀಕ್ಷಿಸಿ, ಪೌಷ್ಟಿಕ ಆಹಾರ ಸೇವನೆ, ವೈಯಕ್ತಿಕ ಸ್ವಚ್ಛತೆ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸಿಬ್ಬಂದಿಗಳಾದ ಯಶಸ್ವಿನಿ (ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ) ಮತ್ತು ಪಕೀರಮ್ಮ (ಸ್ಟಾಫ್ ನರ್ಸ್) ಆರೋಗ್ಯ ತಪಾಸಣೆಯಲ್ಲಿ ಸಹಕರಿಸಿ, ಮಕ್ಕಳಿಗೆ ಅಗತ್ಯ ಸಲಹೆಗಳನ್ನು ನೀಡಿದರು.

ಈ ವೇಳೆ ಮಾತನಾಡಿದ ಮುಖ್ಯೋಪಾಧ್ಯಾಯ ಎ. ಯರ್ರಿಸ್ವಾಮಿ, ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿದ್ದಾಗ ಮಾತ್ರ ಅವರ ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ. ಇಂತಹ ಶಿಬಿರಗಳು ಮಕ್ಕಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವುದರ ಜೊತೆಗೆ ಆರಂಭಿಕ ಹಂತದಲ್ಲೇ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಶಾಲೆಯ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಆರೋಗ್ಯ ಇಲಾಖೆ ಮತ್ತು ಶಾಲೆಯ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಪೋಷಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News