Ballari | ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಗಾರ : ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಲು ಕರೆ

ಐಎಎಸ್–ಐಪಿಎಸ್ ಗುರಿಯೊಂದಿಗೆ ಅಧ್ಯಯನಕ್ಕೆ ಮಾರ್ಗದರ್ಶನ

Update: 2026-07-29 20:22 IST

ಸಂಡೂರು/ಬಳ್ಳಾರಿ: ಶಾಲಾ ಶಿಕ್ಷಣ ಇಲಾಖೆ ಸಂಡೂರು, ಜೀವನ ಸಂಗೀತ ಟ್ರಸ್ಟ್ (ವಿದ್ಯಾನಗರ) ಹಾಗೂ ಸರ್ಕಾರಿ ಪ್ರೌಢಶಾಲೆ ಎಂ. ತುಂಬರಗುದ್ದಿ ಇವರ ಸಂಯುಕ್ತಾಶ್ರಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ಬೆಳೆಸುವ ಉದ್ದೇಶದಿಂದ ಪ್ರೇರಣಾ ಕಾರ್ಯಗಾರವನ್ನು ಸರ್ಕಾರಿ ಪ್ರೌಢಶಾಲೆ ಎಂ. ತುಂಬರಗುದ್ದಿಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಗಳಿಸುವುದರೊಂದಿಗೆ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ಆಡಳಿತಾತ್ಮಕ ಸೇವೆಗಳ ಗುರಿ ಹೊಂದಬೇಕು ಎಂದು ಕರೆ ನೀಡಿದರು. ಇಂತಹ ಕಾರ್ಯಗಾರಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಅವರ ಭವಿಷ್ಯದ ಗುರಿಯನ್ನು ಸ್ಪಷ್ಟಗೊಳಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಜೀವನ ಸಂಗೀತ ಟ್ರಸ್ಟ್ ಅಧ್ಯಕ್ಷೆ ಗೀತಾ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸರ್ಕಾರಿ ಪ್ರೌಢಶಾಲೆ ಎಂ. ತುಂಬರಗುದ್ದಿಯ ಶಿಸ್ತು, ವ್ಯವಸ್ಥೆ ಹಾಗೂ ಸುಂದರ ಪರಿಸರ ಖಾಸಗಿ ಶಾಲೆಗಳಿಗೂ ಮಾದರಿಯಾಗಿದೆ. ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಟ್ರಿಕ್ಸ್ ಅಕಾಡೆಮಿಯ ತುಳಸಿದಾಸ್ ಅವರು ಸುಮಾರು ಮೂರು ಗಂಟೆಗಳ ಕಾಲ ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕ ತರಬೇತಿ ನೀಡಿದರು. ಐಎಎಸ್–ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅಗತ್ಯವಾದ ಅಧ್ಯಯನ ವಿಧಾನಗಳು, ನೆನಪಿನ ಶಕ್ತಿ ವೃದ್ಧಿಸುವ ತಂತ್ರಗಳು, ಪರಿಣಾಮಕಾರಿ ಕಲಿಕಾ ವಿಧಾನಗಳು ಹಾಗೂ ಭಾರತದ ವಿವಿಧ ರಾಜ್ಯಗಳ ವೈಶಿಷ್ಟ್ಯಗಳನ್ನು ನಕ್ಷೆಯ ಮೂಲಕ ಸುಲಭವಾಗಿ ನೆನಪಿಡುವ ವಿಧಾನಗಳನ್ನು ವಿವರಿಸಿದರು.

ಡಯಟ್ ಬಳ್ಳಾರಿಯ ಉಪನ್ಯಾಸಕ ಕಾಶಿನಾಥ ಶಾಸ್ತ್ರಿ ಅವರು ಎಸೆಸೆಲ್ಸಿ ವಿಜ್ಞಾನ ವಿಷಯದ ಚಿತ್ರಗಳನ್ನು ಸುಲಭವಾಗಿ ಬಿಡಿಸುವ ಪ್ರಾಯೋಗಿಕ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ತುಂಬರಗುದ್ದಿ, ಬೊಮ್ಮಘಟ್ಟ, ಚೋರನೂರು, ಸೋವೆನಹಳ್ಳಿ ಹಾಗೂ ಗೊಲ್ಲಲಿಂಗಮ್ಮನಹಳ್ಳಿ ಸೇರಿದಂತೆ ವಿವಿಧ ಸರ್ಕಾರಿ ಪ್ರೌಢಶಾಲೆಗಳ 350ರಿಂದ 400 ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿ ಮಾರ್ಗದರ್ಶನದ ಪ್ರಯೋಜನ ಪಡೆದರು.

ಶಾಲೆಯ ಮುಖ್ಯ ಶಿಕ್ಷಕ ಅಮರೇಶ ಸೊನ್ನದ ಸ್ವಾಗತಿಸಿದರು. ಇಸಿಒ ಗುಳಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಹನುಮಂತಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಂಗಿ ನಾಗರಾಜ್, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ವರಪ್ಪ, ತಾಳೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ್, ಮಾನವ ಹಕ್ಕುಗಳ ಸಮಿತಿಯ ಓಬಳೇಶ್, ನಿವೃತ್ತ ಉಪನ್ಯಾಸಕ ತಿಪ್ಪೇಸ್ವಾಮಿ, ಪ್ರಭಾರಿ ಟಿಪಿಒ ಜಗದೀಶ್, ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಯರಯ್ಯನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News