Siruguppa | ಅಕ್ರಮ ಪಡಿತರ ಅಕ್ಕಿ ಸಾಗಾಟ ಪತ್ತೆ; 9 ಕ್ವಿಂಟಾಲ್ ಅಕ್ಕಿ, ಬೊಲೆರೋ ವಾಹನ ಜಪ್ತಿ
ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ–150ಎ ಸಮೀಪದ ದೇವಿನಗರ ಬಳಿ ಅಕ್ರಮವಾಗಿ ಬೊಲೆರೋ ವಾಹನದಲ್ಲಿ ಸಾಗಿಸಲಾಗುತ್ತಿದ್ದ 9 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಪಡಿತರ ಅಕ್ಕಿ ಸಾಗಾಟ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ತೆಕ್ಕಲಕೋಟೆ ಪೊಲೀಸ್ ಠಾಣೆಯ ಎಎಸ್‌ಐ ಪ್ರಭಾವತಿ ಹಾಗೂ ಸಿರುಗುಪ್ಪ ಆಹಾರ ನಿರೀಕ್ಷಕ ಮಹಾರುದ್ರಗೌಡ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತು.
ದೇವಿನಗರದಿಂದ ಆಂಧ್ರ ಪ್ರದೇಶದ ಹೊಳಗುಂದಿ ಕಡೆಗೆ ಸಾಗಿಸಲಾಗುತ್ತಿದ್ದ ಸುಮಾರು 27 ಸಾವಿರ ರೂ. ಮೌಲ್ಯದ 9 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ವಶಪಡಿಸಿಕೊಂಡರು. ಅಕ್ಕಿ ಸಾಗಾಟಕ್ಕೆ ಬಳಸಲಾಗಿದ್ದ ಬೊಲೆರೋ ವಾಹನವನ್ನು ಸಹ ಜಪ್ತಿ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕ ಉದಯ್ ಕಿರಣ್ ವಿರುದ್ಧ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಡಿತರ ಅಕ್ಕಿಯ ಮೂಲ ಹಾಗೂ ಅಕ್ರಮ ಸಾಗಾಟದ ಉದ್ದೇಶದ ಕುರಿತು ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.