Ballari | ಸೋಮಲಾಪುರ ಸರ್ಕಾರಿ ಶಾಲೆಯ ವಿದ್ಯುತ್ ಸಮಸ್ಯೆಗೆ ಕೊನೆಗೂ ಮುಕ್ತಿ : ಕಂಬ, ತಂತಿ ಅಳವಡಿಸಿ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಿದ ಜೆಸ್ಕಾಂ

Update: 2026-08-19 21:34 IST

ಬಳ್ಳಾರಿ/ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಲಾಪುರ ಗ್ರಾಮದ ಗುಡ್ಡದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭದಿಂದಲೂ ಕಾಡುತ್ತಿದ್ದ ವಿದ್ಯುತ್ ಸರಬರಾಜಿನ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಿದೆ ಎಂದು ಸಿಆರ್‌ಪಿ ಎ.ಎಸ್. ಭೂಮೇಶ್ವರ ಹೇಳಿದರು.

ಶಾಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಜೆಸ್ಕಾಂ ಲೈನ್‌ಮನ್ ಹೊನ್ನೂರಸ್ವಾಮಿ ಅವರನ್ನು ಬುಧವಾರ ಸನ್ಮಾನಿಸಿ ಮಾತನಾಡಿದ ಅವರು, ಗ್ರಾಮದ ಹಳೆಯ ಶಾಲೆಯನ್ನು ಗುಡ್ಡದ ಬಳಿಯಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ 2023ರಲ್ಲಿ ಸ್ಥಳಾಂತರಿಸಲಾಗಿತ್ತು. ಸುಸಜ್ಜಿತ ಕೊಠಡಿಗಳು ಹಾಗೂ ಅಗತ್ಯ ಮೂಲಸೌಕರ್ಯಗಳಿದ್ದರೂ ವಿದ್ಯುತ್ ಸಂಪರ್ಕದ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದರು ಎಂದರು.

ವಿದ್ಯುತ್ ಸಮಸ್ಯೆಯಿಂದ ಕಂಪ್ಯೂಟರ್ ಬಳಕೆ, ಬೆಳಕಿನ ವ್ಯವಸ್ಥೆ ಹಾಗೂ ನೀರು ಪೂರೈಕೆಯಲ್ಲಿಯೂ ತೊಂದರೆಯಾಗಿತ್ತು. ಹೀಗಾಗಿ ತಾತ್ಕಾಲಿಕವಾಗಿ ಕಟ್ಟಿಗೆಯ ಕಂಬಗಳ ಮೂಲಕ ವಿದ್ಯುತ್ ತಂತಿಗಳನ್ನು ಅಳವಡಿಸಿಕೊಂಡು ಸರಬರಾಜು ಮಾಡಲಾಗುತ್ತಿತ್ತು. ಶಾಲೆಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ನಿರಂತರ ಮನವಿಯ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಕಂಬಗಳನ್ನು ಅಳವಡಿಸಿ, ತಂತಿ ಎಳೆದು ಶಾಲೆಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಇದಕ್ಕೆ ಶಾಸಕ ಜೆ.ಎನ್. ಗಣೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ. ಶ್ರೀನಿವಾಸರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧಲಿಂಗಮೂರ್ತಿ, ಎಇಇ ಶ್ರೀನಿವಾಸ ಪ್ರಸಾದ್, ಜೆಇ ಶಮಿಉಲ್ಲಾ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರ ಸಹಕಾರ ಶ್ಲಾಘನೀಯವಾಗಿದೆ ಎಂದರು.

ನಂತರ ಬಡ್ತಿ ಮುಖ್ಯಶಿಕ್ಷಕ ಎಸ್. ಚಂದ್ರಪ್ಪ ಅವರನ್ನೂ ಸನ್ಮಾನಿಸಲಾಯಿತು. ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಸಹಕಾರ ನೀಡುವಂತೆ ಭೂಮೇಶ್ವರ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಕೆ. ಮಲ್ಲಯ್ಯ, ಹೆಚ್. ರಾಜಪ್ಪ, ಅತಿಥಿ ಶಿಕ್ಷಕಿ ಶೃತಿ ಹಾಗೂ ಸಹಾಯಕ ಸಿಬ್ಬಂದಿ ಪೀರಾಂಬೀ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News