Ballari | ಸಾಮಾಜಿಕ ಸೇವೆ ಗುರುತಿಸಿ ಜಗದೀಶ್ ಪೂಜಾರ್‌ಗೆ ‘ಭಾರತ ಭೂಷಣ’ ರಾಷ್ಟ್ರೀಯ ಪ್ರಶಸ್ತಿ
ಆ.23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ
ಬಳ್ಳಾರಿ/ಕಂಪ್ಲಿ: ತಾಲೂಕಿನ ಕಣ್ವಿತಿಮ್ಮಲಾಪುರ ಗ್ರಾಮದ ಜಗದೀಶ್ ಪೂಜಾರ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ಭಾರತ ಭೂಷಣ’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಟ್ರಸ್ಟ್‌ನ ರಾಜ್ಯಾಧ್ಯಕ್ಷ ಅಲೈ ರೊ. ಡಾ. ಜಿ. ಶಿವಣ್ಣ ತಿಳಿಸಿದ್ದಾರೆ.
ಜಗದೀಶ್ ಪೂಜಾರ್ ಅವರು ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗ್ರಾಮೀಣ ಕ್ರೀಡಾಕೂಟ, ಸ್ವಚ್ಛತಾ ಅಭಿಯಾನ, ಸಾಹಸ ಕ್ರೀಡೆಗಳು, ಪಲ್ಸ್ ಪೋಲಿಯೊ, ಆರೋಗ್ಯ ಜಾಗೃತಿ ಬೀದಿ ನಾಟಕ, ರಕ್ತದಾನ ಶಿಬಿರ ಹಾಗೂ ಯುವಜನರಲ್ಲಿ ನಾಯಕತ್ವ ಗುಣ ಬೆಳೆಸುವಂತಹ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದಾರೆ. ಅವರ ಅನುಪಮ ಸೇವೆಯನ್ನು ಪರಿಗಣಿಸಿ ಆ.23ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜಗದೀಶ್ ಪೂಜಾರ್ ಅವರಿಗೆ ಈ ಹಿಂದೆ ರಾಜ್ಯ ಸದ್ಭಾವನ ಪ್ರಶಸ್ತಿ, ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸಮಾಜ ಸೇವಾ ಭಾರ್ಗವ ಪ್ರಶಸ್ತಿಗಳು ಸಂದಿವೆ.
ಪ್ರಸ್ತುತ ಅವರು ಕಣ್ವಿತಿಮ್ಮಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.