Ballari | ತುಂಗಭದ್ರಾ ಕೆಳಮಟ್ಟದ ಕಾಲುವೆಗೆ ಪೂರ್ಣ ಪ್ರಮಾಣದ ನೀರು ಹರಿಸಲು ಶಾಸಕ ಗಣೇಶ್ ಆಗ್ರಹ
ಬಳ್ಳಾರಿ/ಕಂಪ್ಲಿ: ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ ಬಚಾವತ್ ಆಯೋಗದ ಹಂಚಿಕೆಯಂತೆ ಪೂರ್ಣ ಪ್ರಮಾಣದ ನೀರು ಹರಿಸಿದರೆ ಮಾತ್ರ ರಾಜ್ಯದ ರೈತರಿಗೆ ಅನುಕೂಲವಾಗಲಿದೆ ಎಂದು ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಮಾತನಾಡಿದ ಅವರು, ಆ.11ರಂದು ಮುನಿರಾಬಾದ್‌ನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕರ್ನಾಟಕದ ಕೋಟಾದ 750 ಕ್ಯೂಸೆಕ್ ಹಾಗೂ ಆಂಧ್ರಪ್ರದೇಶದ ಕೋಟಾದ 750 ಕ್ಯೂಸೆಕ್ ನೀರನ್ನು ಕಾಲುವೆಗೆ ಹರಿಸುವ ಕುರಿತು ಚರ್ಚಿಸಲಾಗಿತ್ತು. ಆದರೆ, ಆಂಧ್ರಪ್ರದೇಶದ ಕೋಟಾದ ನೀರನ್ನು ಪಡೆಯದ ಹಿನ್ನೆಲೆಯಲ್ಲಿ ಕೇವಲ ಕರ್ನಾಟಕದ ಪಾಲಿನ 750 ಕ್ಯೂಸೆಕ್ ನೀರು ಮಾತ್ರ ಹರಿಯುತ್ತಿದೆ. ಇದರಿಂದ ರೈತರಿಗೆ ಅಗತ್ಯ ಪ್ರಮಾಣದ ನೀರು ದೊರೆಯುತ್ತಿಲ್ಲ ಎಂದು ಹೇಳಿದರು.
ತಮ್ಮ ಕ್ಷೇತ್ರ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಈಗಾಗಲೇ ಭತ್ತದ ಸಸಿ ಮಡಿಗಳನ್ನು ಸಿದ್ಧಪಡಿಸಿದ್ದು, ಕೆಲವೆಡೆ ನಾಟಿ ಕಾರ್ಯವೂ ಆರಂಭವಾಗಿದೆ. ಹೀಗಾಗಿ ಕೂಡಲೇ ಎರಡೂ ರಾಜ್ಯಗಳ ಪಾಲಿನ ನೀರನ್ನು ಕಾಲುವೆಗೆ ಹರಿಸಿದರೆ ನಾಲ್ಕು ತಾಲ್ಲೂಕುಗಳ ರೈತರಿಗೆ ಅನುಕೂಲವಾಗಲಿದೆ. ನೀರು ಸಿಗದಿದ್ದರೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆದ್ದರಿಂದ ಆಂಧ್ರಪ್ರದೇಶದ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಕೂಡಲೇ ಕಾಲುವೆಗೆ ಪೂರ್ಣ ಪ್ರಮಾಣದ ನೀರು ಹರಿಸುವಂತೆ ಹಾಗೂ ತುಂಗಭದ್ರಾ ನದಿಗೆ 500 ಕ್ಯೂಸೆಕ್ ನೀರು ಬಿಡುವಂತೆ ಶಾಸಕ ಗಣೇಶ್ ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವ ಚೆಲುವರಾಯಸ್ವಾಮಿ, ಕಳೆದ ಮೂರು ದಿನಗಳಿಂದ ಶಾಸಕ ಗಣೇಶ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮೊಂದಿಗೆ ನೀರಿನ ಸಮಸ್ಯೆ ಕುರಿತು ಚರ್ಚಿಸಿದ್ದಾರೆ. ತಾವು ಈಗಾಗಲೇ ಆಂಧ್ರಪ್ರದೇಶದ ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಿದ್ದು, ಮುಖ್ಯಮಂತ್ರಿ ಅವರೂ ಅಲ್ಲಿನ ಸಚಿವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿಸಿದರು.
ಎರಡೂ ರಾಜ್ಯಗಳ ಪಾಲಿನ ನೀರನ್ನು ಒಟ್ಟಿಗೆ ಹರಿಸಲು ಆಂಧ್ರಪ್ರದೇಶದ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೆರಡು–ಮೂರು ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.