Ballari | ಪೆಟ್ರೋಲ್ ಬಂಕ್ಗಳಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಪ್ರದರ್ಶಿಸಲು ಆಗ್ರಹ
ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಇ20 ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿದ್ದು, ಹಳೆಯ ವಾಹನಗಳ ಎಂಜಿನ್ಗಳು ಹಾಳಾಗುವ ಭೀತಿ ಎದುರಾಗಿದೆ. ಹೀಗಾಗಿ ಗ್ರಾಹಕರ ಹಿತದೃಷ್ಟಿಯಿಂದ ಪ್ರತಿಯೊಂದು ಪೆಟ್ರೋಲ್ ಬಂಕ್ನಲ್ಲೂ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಒತ್ತಾಯಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ರವಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಥೆನಾಲ್ ಮಿಶ್ರಣದಿಂದ ವಾಹನಗಳ ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆ ಕುಸಿಯುತ್ತಿದೆ. 2021ರ ನೀತಿ ಆಯೋಗದ ವರದಿಯ ಪ್ರಕಾರ, ಇ20 ಇಂಧನ ಬಳಕೆಯಿಂದ ಹೊಸ ವಾಹನಗಳಲ್ಲಿ ಶೇ.1ರಿಂದ 2ರಷ್ಟು, ಹಳೆಯ ಕಾರುಗಳಲ್ಲಿ ಶೇ.6ರಿಂದ 7ರಷ್ಟು ಹಾಗೂ ಹಳೆಯ ದ್ವಿಚಕ್ರ ವಾಹನಗಳಲ್ಲಿ ಶೇ.3ರಿಂದ 4ರಷ್ಟು ಮೈಲೇಜ್ ಕಡಿಮೆಯಾಗುತ್ತದೆ. ವಿಶೇಷವಾಗಿ ಬಿಎಸ್6 ಪೂರ್ವದ ವಾಹನಗಳ ಮಾಲೀಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ರೈತರ ಬೆಳೆಗಳಿಗೆ ನೀರು ಪೂರೈಸಿ :
ತುಂಗಭದ್ರಾ ನದಿಯಿಂದ ಎಲ್ಎಲ್ಸಿ (ಕೆಳಮಟ್ಟದ) ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಸಿ ರೈತರ ಬೆಳೆಗಳನ್ನು ರಕ್ಷಿಸಬೇಕು. ನೀರಿನ ಅಭಾವದಿಂದ ಕೃಷಿಕರು ನಷ್ಟ ಅನುಭವಿಸದಂತೆ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನಗರದ ಕೆಲವು ಹೋಟೆಲ್ಗಳಲ್ಲಿ ಕಲಬೆರಕೆ ಮಾಂಸ ಪೂರೈಕೆಯಾಗುತ್ತಿದೆ ಎಂಬ ದೂರುಗಳಿದ್ದು, ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣ ಗಂಭೀರ ತನಿಖೆ ನಡೆಸಬೇಕು. ಮಾಂಸದ ಗುಣಮಟ್ಟ ಹಾಗೂ ಅದರ ಮೂಲವನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸುವ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.