ಪಿಂಜಾರ, ನದಾಫ್ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧ: ಸಚಿವ ಯು.ಟಿ. ಖಾದರ್
ಬಳ್ಳಾರಿ: ಪಿಂಜಾರ ಮತ್ತು ನದಾಫ್ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು, ಸಮುದಾಯದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಭರವಸೆ ನೀಡಿದರು.
ನಗರದ ವಾಲ್ಮೀಕಿ ಭವನದಲ್ಲಿ ಕರ್ನಾಟಕ ರಾಜ್ಯ ಪಿಂಜಾರ್/ನದಾಫ್ ಸಂಘದ 34ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಪಿಂಜಾರ ಸಮುದಾಯದ ಭವನ ನಿರ್ಮಾಣ ಕಾರ್ಯ ಆರಂಭಿಸಿದರೆ 2 ಕೋಟಿ ರೂ. ಅನುದಾನ ಒದಗಿಸಲಾಗುವುದು. ಜೊತೆಗೆ, ಸಮುದಾಯದ ಇತಿಹಾಸ, ಪರಂಪರೆ ಹಾಗೂ ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಅಧ್ಯಯನ ಪೀಠ ಸ್ಥಾಪಿಸಲು ವಿಶ್ವವಿದ್ಯಾಲಯ ಹಾಗೂ ಸರ್ಕಾರದ ಒಪ್ಪಿಗೆಯೊಂದಿಗೆ 2 ಕೋಟಿ ರೂ. ಕಾರ್ಪಸ್ ಫಂಡ್ ನೀಡಲಾಗುವುದು ಎಂದು ತಿಳಿಸಿದರು.
ನಗರ ಶಾಸಕ ನಾರಾ ಭರತ್ರೆಡ್ಡಿ ಮಾತನಾಡಿ, ಪಿಂಜಾರ್/ನದಾಫ್ ಸಮಾಜದೊಂದಿಗಿನ ತಮ್ಮ ಬಾಂಧವ್ಯ ಬಹಳ ಹಿಂದಿನದು. ಸಮಾಜದಲ್ಲಿ ಶಾಸಕರು, ಸಂಸದರು ಇಲ್ಲ ಎಂದು ಕೊರಗಬೇಡಿ. ನಾನೇ ನಿಮ್ಮ ಸಮಾಜದ ಶಾಸಕ ಎಂದು ಭಾವಿಸಿ ಎಂದು ಅಭಯ ನೀಡಿದರು. ಇದೇ ವೇಳೆ ಸಂಘದ ಚಟುವಟಿಕೆಗಳಿಗಾಗಿ 10 ಲಕ್ಷ ರೂ. ದೇಣಿಗೆ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸಂಡೂರು ಶಾಸಕಿ ಅನ್ನಪೂರ್ಣಾ ತುಕಾರಾಂ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಖಾಜಿ ಗುಲಾಂ ಮೊಹಮ್ಮದ್ ಸಿದ್ದಿಕಿ, ಪಿಂಜಾರ್ ನದಾಫ್ ಸಮಾಜದ ರಾಜ್ಯಾಧ್ಯಕ್ಷ ಜಲೀಲಸಾಬ್, ವಿಭಾಗ ಅಧ್ಯಕ್ಷ ಶಾಸಾಬ್, ಜಿಲ್ಲಾಧ್ಯಕ್ಷ ಮೌಲಾಲಿ, ನಗರಾಧ್ಯಕ್ಷ ನಬಿಸಾಬ್, ಮೇಯರ್ ಪಿ. ಗಾದೆಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡರಾದ ಹುಮಾಯೂನ್ ಖಾನ್, ವೆಂಕಟೇಶ್ ಪ್ರಸಾದ್ ಹಾಗೂ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಉಪಸ್ಥಿತರಿದ್ದರು.