Ballari | ಮಹಿಳಾ ಸಬಲೀಕರಣಕ್ಕೆ 4 ಲಕ್ಷ ರೂ. ಸುತ್ತು ನಿಧಿ, 20 ಹೊಗೆರಹಿತ ಒಲೆ ವಿತರಣೆ

ಸೋಮಲಾಪುರದಲ್ಲಿ ಬಲ್ಡೋಟಾ ಮಹಿಳಾ ಸಬಲೀಕರಣ–ಪರಿಸರ ಸುಸ್ಥಿರತಾ ಕಾರ್ಯಕ್ರಮ

Update: 2026-08-11 18:12 IST

ಸಂಡೂರು/ಬಳ್ಳಾರಿ: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಉತ್ತೇಜನ ನೀಡುವುದರ ಜತೆಗೆ ಗ್ರಾಮೀಣ ಕುಟುಂಬಗಳಲ್ಲಿ ಸ್ವಚ್ಛ ಇಂಧನ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಲ್ಡೋಟಾ ಸಂಸ್ಥೆಯ ವತಿಯಿಂದ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮಹಿಳಾ ಸಬಲೀಕರಣ ಹಾಗೂ ಪರಿಸರ ಸುಸ್ಥಿರತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಬಲ್ಡೋಟಾ ಮಹಿಳಾ ಸಬಲೀಕರಣ ಯೋಜನೆ ಹಾಗೂ ಪರಿಸರ ಸುಸ್ಥಿರತಾ ಕಾರ್ಯಕ್ರಮ 2026–27ರ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ 4 ಲಕ್ಷ ರೂ. ಸುತ್ತು ನಿಧಿ ಹಾಗೂ 20 ಹೊಗೆರಹಿತ ಒಲೆಗಳನ್ನು ವಿತರಿಸಲಾಯಿತು.

ಒಟ್ಟು ಆರು ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ವಿತರಿಸಲಾಗಿದ್ದು, ಬೊಮ್ಮಲಿಂಗೇಶ್ವರ, ಜೈಭಾರತಿ, ಮುರಾರಿ, ಮಹಾಲಕ್ಷ್ಮೀ ಹಾಗೂ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘಗಳಿಗೆ ತಲಾ 60 ಸಾವಿರ ರೂ. ಹಾಗೂ ದುರ್ಗಮ್ಮ ಸ್ವಸಹಾಯ ಸಂಘಕ್ಕೆ 1 ಲಕ್ಷ ರೂ. ನೀಡಲಾಯಿತು.

ಸುತ್ತು ನಿಧಿಯು ಸ್ವಸಹಾಯ ಸಂಘಗಳ ಆಂತರಿಕ ಸಾಲ ವಿತರಣೆ, ಜೀವನೋಪಾಯ ಚಟುವಟಿಕೆಗಳು ಹಾಗೂ ಸಣ್ಣ ಉದ್ಯಮಗಳಿಗೆ ಆರ್ಥಿಕ ನೆರವು ಒದಗಿಸುವ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.

20 ಹೊಗೆರಹಿತ ಒಲೆ ವಿತರಣೆ :

ಪರಿಸರ ಸುಸ್ಥಿರತಾ ಕಾರ್ಯಕ್ರಮದಡಿ ಸ್ವಸಹಾಯ ಸಂಘಗಳ ಸದಸ್ಯರಿಗೆ 20 ಹೊಗೆರಹಿತ ಒಲೆಗಳನ್ನು ವಿತರಿಸಲಾಯಿತು. ಇವುಗಳ ಬಳಕೆಯಿಂದ ಗ್ರಾಮೀಣ ಮನೆಗಳಲ್ಲಿ ಸ್ವಚ್ಛ ಇಂಧನ ಬಳಕೆಗೆ ಉತ್ತೇಜನ ದೊರೆಯುವುದರ ಜತೆಗೆ ಒಳಾಂಗಣ ವಾಯುಮಾಲಿನ್ಯ ಕಡಿಮೆಯಾಗಿ ಮಹಿಳೆಯರು ಹಾಗೂ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.

ಮಹಿಳೆಯರ ಆರ್ಥಿಕ ಸಬಲೀಕರಣದ ಜತೆಗೆ ಪರಿಸರ ಸಂರಕ್ಷಣೆ ಮತ್ತು ಆರೋಗ್ಯಕರ ಜೀವನಶೈಲಿಗೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ಗ್ರಾಮೀಣ ಸಮುದಾಯದ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ ಪಿಪಿ-2 ಘಟಕದ ಪ್ಲಾಂಟ್ ಹೆಡ್ ಮದ್ದುಕುರಿ ಭರತ ಚಂದ್ರ ಸಿಂಹ, ಜಿಎಂ-ಎಚ್‌ಆರ್ ವೀರೇಶ್ ಸಾಮಂತ್ರೀ, ಜಿಎಂ-ಸಿಎಸ್‌ಆರ್ ರಾಮಬಾಬು, ಸಿಸಿ ವಿಭಾಗದ ತಿಪ್ಪೇಸ್ವಾಮಿ ಹಾಗೂ ಧನುಷ್, ಸಿಎಸ್‌ಆರ್ ವಿಭಾಗದ ವಿಜಯಕುಮಾರ ಪಿ.ಎಂ. ಸೇರಿದಂತೆ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News