ಮಾಲಿನ್ಯ ನಿಯಂತ್ರಣ, ರೈತರ ಸ್ವಾವಲಂಬನೆ, ಮಕ್ಕಳ ಶಿಕ್ಷಣ–ಆರೋಗ್ಯಕ್ಕೆ ಆದ್ಯತೆ: ಶಾಸಕಿ ಅನ್ನಪೂರ್ಣ ಈ. ತುಕಾರಾಂ
ಸಂಡೂರು/ಬಳ್ಳಾರಿ: ತಾಲೂಕಿನ ಅಭಿವೃದ್ಧಿಯ ಹೆಸರಿನಲ್ಲಿ ಜನರ ಆರೋಗ್ಯ ಮತ್ತು ಪರಿಸರದ ಜತೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೈಗಾರಿಕೆಗಳು ವೈಜ್ಞಾನಿಕ ನಿಯಮಗಳನ್ನು ಪಾಲಿಸುವುದರ ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕಡತಗಳ ಮೇಲೆ ಕೆಲಸ ತೋರಿಸದೆ, ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹಾರ ಕಲ್ಪಿಸಬೇಕು ಎಂದು ಸಂಡೂರು ಶಾಸಕಿ ಅನ್ನಪೂರ್ಣ ಈ. ತುಕಾರಾಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಾಲಿನ್ಯ ನಿಯಂತ್ರಣ, ಕೃಷಿ, ಶಿಕ್ಷಣ, ಮಕ್ಕಳ ಆರೋಗ್ಯ, ಅಂಗನವಾಡಿ ಹಾಗೂ ಸಾಮಾಜಿಕ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಿದರು.
ಜಿಂದಾಲ್ ಸೇರಿದಂತೆ ವಿವಿಧ ಕೈಗಾರಿಕೆಗಳು ಹಾಗೂ ಅದಿರು ಸಾಗಿಸುವ ವಾಹನಗಳಿಂದ ಉಂಟಾಗುತ್ತಿರುವ ವಾಯು ಮತ್ತು ಜಲ ಮಾಲಿನ್ಯದ ಕುರಿತು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ, ಪರಿಸರ ಅಧಿಕಾರಿಗಳು ಕೈಗಾರಿಕೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಚಿಮಣಿ ಎತ್ತರ, ಹೊಗೆ ಹೊರಸೂಸುವಿಕೆ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ನಿಯಮಗಳ ಪಾಲನೆಯನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದರು.
ದರೋಜಿ ಭಾಗದ ನೀರು ಕಲುಷಿತಗೊಂಡಿರುವ ಹಿನ್ನೆಲೆಯಲ್ಲಿ ಕೆರೆ ಹಾಗೂ ಸುತ್ತಮುತ್ತಲಿನ ಮಣ್ಣು ಮತ್ತು ನೀರಿನ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಶೀಘ್ರ ವರದಿ ನೀಡಬೇಕು ಎಂದು ಸೂಚಿಸಿದ ಅವರು, ಕೈಗಾರಿಕೆಗಳನ್ನೂ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಕೃಷಿಯಲ್ಲಿ ಪರ್ಯಾಯ ಬೆಳೆಗಳಿಗೆ ಒತ್ತು
ಸಾಂಪ್ರದಾಯಿಕ ಬೆಳೆಗಳ ಜತೆಗೆ ತರಕಾರಿ, ಬಾಳೆ, ಮಾವು, ಕೊಕೋ, ತೆಂಗು ಸೇರಿದಂತೆ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ರೈತರನ್ನು ಪ್ರೋತ್ಸಾಹಿಸಬೇಕು. ‘ಮಾವು ಮೇಳ’ದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಿಗೆ ಅರಿವು ಮೂಡಿಸಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹನಿ ನೀರಾವರಿ, ಸೋಲಾರ್ ಫೆನ್ಸಿಂಗ್ ಹಾಗೂ ಕೃಷಿ ಯಂತ್ರೋಪಕರಣಗಳ ಸಹಾಯಧನ ತಲುಪಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ಶಾಸಕಿ ಸೂಚಿಸಿದರು.
32,815 ಮಕ್ಕಳಿಗೆ ಪೌಷ್ಟಿಕ ಆಹಾರ
ತಾಲೂಕಿನ 32,815 ವಿದ್ಯಾರ್ಥಿಗಳು ವಿವಿಧ ಪೌಷ್ಟಿಕ ಆಹಾರ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ ಸಭೆಗೆ ಮಾಹಿತಿ ನೀಡಿದರು. 169 ಸರ್ಕಾರಿ ಶಾಲೆಗಳ 26,209 ಮಕ್ಕಳಿಗೆ ರೂ. 13.38 ಕೋಟಿ ವೆಚ್ಚದಲ್ಲಿ ಮೂರು ವರ್ಷಗಳ ವಿಶೇಷ ಸಂಜೆ ಉಪಹಾರ ಯೋಜನೆ ಜಾರಿಯಲ್ಲಿದೆ. ತಾಲೂಕಿನ 94 ಶಾಲೆಗಳಿಗೆ ಅಕ್ಷಯಪಾತ್ರ ಸಂಸ್ಥೆಯ ಮೂಲಕ ಬಿಸಿಯೂಟ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ವಾರಕ್ಕೆ ಎರಡು ಪೀರಿಯಡ್ ಪುಸ್ತಕ ಓದಲು ಅವಕಾಶ, ದಿನನಿತ್ಯ ಪಾಠದ ಪುನರಾವರ್ತನೆ, ತಂಡ ಕಾರ್ಯ ಹಾಗೂ ನಾಯಕತ್ವ ಚಟುವಟಿಕೆಗಳನ್ನು ಉತ್ತೇಜಿಸಬೇಕು. ಜಾತಿ–ಧರ್ಮದ ಭೇದವಿಲ್ಲದೆ ಸೌಹಾರ್ದತೆ ಮತ್ತು ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದು ಶಾಸಕಿ ಶಿಕ್ಷಣ ಇಲಾಖೆಗೆ ಸೂಚಿಸಿದರು.
ಕ್ರೀಡೆಯಲ್ಲಿ ಪ್ರತಿಭೆ ಹೊಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಖೋ-ಖೋ, ವಾಲಿಬಾಲ್, ಬಾಸ್ಕೆಟ್‌ಬಾಲ್, ಯೋಗ, ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಶಾಲೆ ಬಿಡುವ ಮಕ್ಕಳ ಸಂಖ್ಯೆ ಶೂನ್ಯವಾಗಲಿ
ಶಾಲೆಯಿಂದ ಹೊರಗುಳಿಯುವ ಮಕ್ಕಳನ್ನು ತಡೆಯಲು ಆಗಸ್ಟ್‌ನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಶಿಕ್ಷಣ ಇಲಾಖೆ, ಮಕ್ಕಳ ರಕ್ಷಣಾ ಘಟಕ ಹಾಗೂ ಚೈಲ್ಡ್ ಹೆಲ್ಪ್‌ಲೈನ್ ಸಹಯೋಗದಲ್ಲಿ ಬೀದಿ ನಾಟಕ ಮತ್ತು ಕಿರುಚಿತ್ರಗಳ ಮೂಲಕ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಅಂಗನವಾಡಿ, ಮಕ್ಕಳ ಆರೋಗ್ಯಕ್ಕೂ ಆದ್ಯತೆ
ಕೆಎಂಆರ್‌ಎಸ್ ಯೋಜನೆಯಡಿ ₹15.67 ಕೋಟಿ ವೆಚ್ಚದಲ್ಲಿ 52 ಅಂಗನವಾಡಿ ಕಟ್ಟಡಗಳು ಹಾಗೂ 118 ಕೇಂದ್ರಗಳ ಉನ್ನತೀಕರಣಕ್ಕೆ ಟೆಂಡರ್ ಪೂರ್ಣಗೊಂಡಿದೆ. ಶಿಥಿಲಗೊಂಡಿರುವ 24 ಕಟ್ಟಡಗಳ ಅಭಿವೃದ್ಧಿಗೆ ₹7.20 ಕೋಟಿ ಅನುಮೋದನೆ ದೊರೆತಿದ್ದು, ಹಳೆಯ 50 ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಅಪೌಷ್ಟಿಕ ಮಕ್ಕಳಿಗೆ ಅಗತ್ಯ ಚಿಕಿತ್ಸೆ ಹಾಗೂ NRC ದಾಖಲಾತಿ, ಆರ್‌ಬಿಎಸ್‌ಕೆ ತಂಡದಿಂದ ನಿಯಮಿತ ಆರೋಗ್ಯ ತಪಾಸಣೆ ಹಾಗೂ ಗರ್ಭಿಣಿ–ಬಾಣಂತಿಯರ ಅನಿಮಿಯಾ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಯಿತು.
ಗೊಲ್ಲರಹಟ್ಟಿಗಳ ಮೌಢ್ಯ ಪದ್ಧತಿ ನಿರ್ಮೂಲನೆಗೆ ಸೂಚನೆ
ಚೋರುನೂರು ಭಾಗದ ಕೆಲವು ಗೊಲ್ಲರಹಟ್ಟಿಗಳಲ್ಲಿ ಋತುಮತಿಯಾದ ಮಹಿಳೆಯರನ್ನು ಪ್ರತ್ಯೇಕ ಗುಡಿಸಲಿನಲ್ಲಿ ಇರಿಸುವ ಅವೈಜ್ಞಾನಿಕ ಪದ್ಧತಿ ಮುಂದುವರಿದಿರುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ, ಸಮಾಜ ಕಲ್ಯಾಣ ಹಾಗೂ ಶಿಕ್ಷಣ ಸೇರಿದಂತೆ ಸಂಬಂಧಿತ ಎಲ್ಲ ಇಲಾಖೆಗಳು ಜಂಟಿಯಾಗಿ ಸ್ಥಳಕ್ಕೆ ತೆರಳಿ ಜನರಲ್ಲಿ ವೈಜ್ಞಾನಿಕ ಅರಿವು ಮೂಡಿಸಿ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಶಾಸಕಿ ಖಡಕ್ ಸೂಚನೆ ನೀಡಿದರು.
“ಕಾಗದದ ಮೇಲಿನ ಪ್ರಗತಿ ಸಾಕಾಗುವುದಿಲ್ಲ. ಅಧಿಕಾರಿಗಳು ಜನರ ನಡುವೆ ತೆರಳಿ ಸಮಸ್ಯೆಗಳನ್ನು ಅರಿತು ಪರಿಹಾರ ನೀಡಬೇಕು. ಜನರ ಆರೋಗ್ಯ, ಪರಿಸರ, ರೈತರ ಬದುಕು ಹಾಗೂ ಮಕ್ಕಳ ಭವಿಷ್ಯವೇ ಅಭಿವೃದ್ಧಿಯ ಕೇಂದ್ರಬಿಂದುವಾಗಬೇಕು” ಎಂದು ಅವರು ಹೇಳಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ನೂರುದ್ದೀನ್, ಸಿಡಿಪಿಒ ನಾಗರಾಜ್, ತೋಟಗಾರಿಕೆ ಇಲಾಖೆ ಎಡಿ ಹನುಮಂತಪ್ಪ, ಪಶುಸಂಗೋಪನೆ ಇಲಾಖೆಯ ಡಾ. ವಲಿಬಾಷಾ, ರೈತ ಸಂಪರ್ಕ ಕೇಂದ್ರದ ಸಹಾಯಕ ನಿರ್ದೇಶಕ ಮಹಮ್ಮದ್ ರಫಿಯುಲ್ಲಾ ರಜ್ವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.