Ballari | ಮಹಿಳೆಯರ ನಿರಂತರ ಆದಾಯಕ್ಕೆ ಮೀನು ಕೃಷಿ ಸಹಕಾರಿ: ಮಡಗಿನ ಬಸಪ್ಪ
ಸಂಡೂರು/ಬಳ್ಳಾರಿ: ಗ್ರಾಮೀಣ ಮಹಿಳೆಯರಿಗೆ ಪರ್ಯಾಯ ಹಾಗೂ ನಿರಂತರ ಆದಾಯದ ಮೂಲ ಕಲ್ಪಿಸುವ ಉದ್ದೇಶದಿಂದ ಮತ್ಸ್ಯ ಸಂಜೀವಿನಿ ಯೋಜನೆಯಡಿ ಮೀನು ಕೃಷಿ ವಿಸ್ತರಣೆ ಕಾರ್ಯಕ್ರಮಕ್ಕೆ ಸಂಡೂರು ತಾಲೂಕಿನ ಕೃಷ್ಣಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೌಲತ್ತಪುರ ಗ್ರಾಮದ ಸಿಂಗನಕೆರೆಯಲ್ಲಿ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯಿತಿ ಬಳ್ಳಾರಿ, ತಾಲೂಕು ಪಂಚಾಯಿತಿ ಸಂಡೂರು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮೀನುಗಾರಿಕೆ ಇಲಾಖೆ, ಕೃಷ್ಣಾನಗರ ಗ್ರಾಮ ಪಂಚಾಯಿತಿ ಹಾಗೂ ಭಾರತಾಂಬೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕು ಪಂಚಾಯಿತಿ ಸಂಡೂರಿನ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ, ಸಹಾಯಕ ನಿರ್ದೇಶಕರಾದ ವಸಂತ ಕುಮಾರ್ ಹಾಗೂ ಮಹೇಶ್ ಕುಮಾರ್ ಅವರು ಸಿಂಗನಕೆರೆಯಲ್ಲಿ 20,000 ಮೀನು ಮರಿಗಳನ್ನು ಕೆರೆಗೆ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಇಒ ಮಡಗಿನ ಬಸಪ್ಪ, ಸಂಡೂರು ತಾಲೂಕು ವ್ಯಾಪ್ತಿಯಲ್ಲಿ 2026–27ನೇ ಸಾಲಿನಲ್ಲಿ ಮತ್ಸ್ಯ ಸಂಜೀವಿನಿ ಯೋಜನೆಯಡಿ ಒಟ್ಟು ಏಳು ಕೆರೆಗಳನ್ನು ಗುರುತಿಸಲಾಗಿದೆ. ಈಗಾಗಲೇ ಚೋರನೂರು ಗ್ರಾಮದ ರಾಜನಹಳ್ಳಿ ಕೆರೆಯಲ್ಲಿ ಕಳೆದ ವರ್ಷ ಮೀನು ಕೃಷಿ ಕೈಗೊಳ್ಳಲಾಗಿತ್ತು. ಪ್ರಸ್ತುತ ದೌಲತ್ತಪುರ ಗ್ರಾಮದ ಸಿಂಗನಕೆರೆಯಲ್ಲಿ ಬರ ಪರಿಸ್ಥಿತಿಯ ನಡುವೆಯೂ ನೀರಿನ ಲಭ್ಯತೆ ಇರುವುದರಿಂದ ಅಲಿಯಾ ಸ್ವಸಹಾಯ ಸಂಘದ ಮಹಿಳೆಯರು ಮೀನು ಕೃಷಿ ಕೈಗೊಳ್ಳಲು ಆಸಕ್ತಿ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಜನೆಯನ್ನು ಇಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಸಂಜೀವಿನಿ ಯೋಜನೆಯು ಗ್ರಾಮೀಣ ಮಹಿಳೆಯರಿಗೆ ಬಡತನ ನಿರ್ಮೂಲನೆಯೊಂದಿಗೆ ವಿವಿಧ ಜೀವನೋಪಾಯ ಚಟುವಟಿಕೆಗಳ ಮೂಲಕ ನಿರಂತರ ಆದಾಯ ಗಳಿಸಲು ಉತ್ತಮ ಅವಕಾಶ ಕಲ್ಪಿಸುತ್ತದೆ. ಮಹಿಳೆಯರು ಒಂದಕ್ಕಿಂತ ಹೆಚ್ಚು ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕುಟುಂಬದ ಆದಾಯ ಹೆಚ್ಚಿಸಿಕೊಳ್ಳಬೇಕು. ಸಿಂಗನಕೆರೆಯಲ್ಲಿ ಯಶಸ್ವಿಯಾಗಿ ಮೀನು ಕೃಷಿ ನಡೆಸಿ, ಇತರೆ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ಯೋಜನೆಯಡಿ ಗುರುತಿಸಿರುವ ಕೆಲವು ಕೆರೆಗಳಲ್ಲಿ ನೀರಿನ ಲಭ್ಯತೆ ಇಲ್ಲದ ಕಾರಣ ಅನುಷ್ಠಾನದಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಲಭ್ಯತೆ ಇರುವ ಕೆರೆಗಳನ್ನು ಗುರುತಿಸಿ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಮೀನು ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೃಷ್ಣಾನಗರ ಗ್ರಾಮ ಪಂಚಾಯಿತಿ ಪಿಡಿಒ ಪಕ್ಕೀರಪ್ಪ ಬುದಗುಪ್ಪಿ, ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸೋಮಶೇಖರ್, ಕೃಷಿ ಜೀವನೋಪಾಯ ವಿಭಾಗದ ವ್ಯವಸ್ಥಾಪಕ ರವಿಚಂದ್ರ ಎಚ್., ಕೃಷಿಯೇತರ ಜೀವನೋಪಾಯ ವಿಭಾಗದ ವ್ಯವಸ್ಥಾಪಕಿ ಪದ್ಮಜಾ, ಭಾರತಾಂಬೆ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ಗೋವಿಂದಮ್ಮ, ಒಕ್ಕೂಟದ ಸಿಬ್ಬಂದಿಗಳಾದ ಹಮೀದ್, ಅಪ್ಸಾನ, ಬಲ್ಕಿಷ್, ಮುಮ್ತಾಜ್, ಶೈನಜ್ ಸೇರಿದಂತೆ ಅಲಿಯಾ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.